ಮೈಸೂರು : ಪಾಕಿಸ್ತಾನಕ್ಕೆ ಜೈ ಎಂದವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಕಾರ್ಮಿಕ ದಿನಾಚರಣೆ, ಎಲ್ಲಾ ಕಾರ್ಮಿಕರಿಗೂ ಶುಭಾಶಯ ಎಂದರು.
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲಿ ಇಡೀ ದೇಶವು ಮೋದಿ, ಸರ್ಕಾರ ಹಾಗೂ ಸೈನಿಕರ ಜೊತೆಗೆ ನಿಲ್ಲಬೇಕು. ನಾವ್ಯಾರು ಇಲ್ಲಿ ಬೇರೆ ಬೇರೆ ರೀತಿ ಮಾತನಾಡಲು ಆಗಲ್ಲ ಎಂದು ಹೇಳಿದರು.
ಅಂದು ಇಂದಿರಾ ಗಾಂಧಿಗೆ ಇಡೀ ದೇಶದ ಬೆಂಬಲ ಸಿಕ್ಕಿತ್ತು: 1971ರಲ್ಲಿ ಇಂದಿರಾ ಗಾಂಧಿ ಪಾಕಿಸ್ತಾನವನ್ನು ಬಗ್ಗುಬಡಿದಾಗ ಇಡೀ ದೇಶ ಹಾಗೂ ವಿರೋಧ ಪಕ್ಷದವರು ಅವರ ಜೊತೆಗಿದ್ದು ಬೆಂಬಲ ಕೊಟ್ಟರು ಎಂಬುದನ್ನು ಹೆಚ್ ವಿಶ್ವನಾಥ್ ಸ್ಮರಿಸಿದರು.
ನಮ್ಮ ದೇಶದಲ್ಲಿದ್ದು ಪಾಕಿಸ್ತಾನಕ್ಕೆ ಜೈ ಎನ್ನುವರು ದೇಶದ್ರೋಹಿಗಳು. ಅದಕ್ಕಾಗಿ ಒಂದು ಕಾನೂನನ್ನು ತರಬೇಕು. ಅವರಿಗೆ ಎಲ್ಲಾ ಸೌಲಭ್ಯಗಳನ್ನು ಕಡಿತಗೊಳಿಸಬೇಕು. ಅವರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರದ ಗಣತಿಗೆ ವಿಶ್ವಾಸ ಹೆಚ್ಚು. ಕೇಂದ್ರ ಸರ್ಕಾರ ಜನಗಣತಿ ಹಾಗೂ ಜಾತಿ ಗಣತಿ ಮಾಡುವ ವಿಚಾರವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಕೇಂದ್ರದ ಗಣತಿಯ ವಿಚಾರದಲ್ಲಿ ವಿಶ್ವಾಸಾರ್ಹತೆ ಹೆಚ್ಚು. ಆದರೆ ಕರ್ನಾಟಕ ಮುಖ್ಯಮಂತ್ರಿ ಜಾತಿ ಗಣತಿ ಬಗ್ಗೆ ಬೇಕಾಬಿಟ್ಟಿ ಮಾತನಾಡುತ್ತಾರೆ. ಸಿಎಂ ತಮಗೆ ಬೇಕಾದವರನ್ನು ಕೂರಿಸಿಕೊಂಡು ಜಾತಿ ಗಣತಿ ಮಾಡಿಸಿ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್ ವಿಶ್ವನಾಥ್ ಹರಿಹಾಯ್ದರು.
ಕಾಂತರಾಜ್ ವರದಿ ಎಲ್ಲಿದೆ ಎಂಬುದು ಇನ್ನೂ ಸಿಕ್ಕಿಲ್ಲ. ಆದರೆ ಸಿದ್ದರಾಮಯ್ಯ ವರದಿಯನ್ನ ಓದಿಲ್ಲ. ಸುಮ್ಮನೆ ಏನ್ ಏನೋ ಮಾತನಾಡುತ್ತಾರೆ. ಕರ್ನಾಟಕ ಜಾತಿ ಗಣತಿ ರಾಜಕೀಯಗೊಂಡಿದೆ. ಜಾತಿ ಗಣತಿ ಟೀಂ ಒಂದು ರೀತಿ ಗಂಜಿ ಕೇಂದ್ರದ ಟೀಂ ಎನಿಸುತ್ತದೆ. ಆದ್ದರಿಂದ, ಕರ್ನಾಟಕದ ಜಾತಿ ಗಣತಿ ಸಮಸ್ಯೆ ಹಾಗೂ ಗೊಂದಲಗಳಿಂದ ಕೂಡಿದೆ ಎಂದು ಟೀಕಿಸಿದರು.