ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ -1ರ ಫಲಿತಾಂಶ ಶುಕ್ರವಾರ ಘೋಷಣೆಯಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನಾಳೆ ಬೆಳಗ್ಗೆ 11.30 ಗಂಟೆ ಸುಮಾರು ಸುದ್ಧಿಗೋಷ್ಟಿಯಲ್ಲಿ ಫಲಿತಾಂಶದ ವಿವರಗಳನ್ನು ಪ್ರಕಟಿಸಲಿದ್ದಾರೆ.
ಕಳೆದ ಮಾರ್ಚ್ 21ರಿಂದ ಏಪ್ರಿಲ್ 4ನೇ ತಾರೀಖಿನವರೆಗೆ ನಡೆದ ಹತ್ತನೇ ತರಗತಿ ಪರೀಕ್ಷೆಯ ಎಲ್ಲಾ ಉತ್ತರಪತ್ರಿಕೆಗಳ ಮೌಲ್ಯಮಾಪನವು ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ನಾಳೆ ಪ್ರಕಟಿಸಲು ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಿದ್ಧತೆ ಮಾಡಿಕೊಂಡಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ಧಿಗೋಷ್ಟಿಯಲ್ಲಿ ಫಲಿತಾಂಶದ ಪ್ರಮುಖ ವಿವರಗಳನ್ನು ಪ್ರಕಟಿಸಿದ ಬಳಿಕ ಆಯಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದಾಗಿದೆ. ಇದರ ಜೊತೆಗೆ https://karresults.nic.in ಜಾಲತಾಣದಲ್ಲಿ ಅಪರಾಹ್ನ 12.30ರ ನಂತರ ಫಲಿತಾಂಶ ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರಾದ ಹೆಚ್.ಬಸವರಾಜೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ರಾಜ್ಯದಾದ್ಯಂತ 2818 ಕೇಂದ್ರಗಳಲ್ಲಿ ನಡೆದ 10ನೇ ತರಗತಿ ಪರೀಕ್ಷೆಗೆ 8 ಲಕ್ಷದ 96 ಸಾವಿರದ 447 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 4.61 ಲಕ್ಷ ವಿದ್ಯಾರ್ಥಿಗಳು ಮತ್ತು 4.34 ಲಕ್ಷ ವಿದ್ಯಾರ್ಥಿನಿಯರಿದ್ದರು. ಪರೀಕ್ಷೆ ಅಂತ್ಯವಾಗುತ್ತಿದ್ದಂತೆ 240 ಸೆಂಟರ್ಗಳಲ್ಲಿ ಸುಮಾರು 65 ಸಾವಿರ ಶಿಕ್ಷಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತ್ವರಿತವಾಗಿ ಫಲಿತಾಂಶ ನೀಡಲು ಸಹಕಾರಿಯಾಗಿದ್ದಾರೆ.