Breaking News
Home / ಜಿಲ್ಲೆ / ಬೆಂಗಳೂರು / 24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

24ರ ಸಾರಿಗೆ ಮುಷ್ಕರ ಕೈಬಿಡಲ್ಲ: ಆರ್. ಚಂದ್ರಶೇಖರ್

Spread the love

ಬೆಂಗಳೂರು: ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಡುವಂತೆ ಅಧಿಕಾರಿಗಳು ನಡೆಸಿದ ಸಂಧಾನ ಸಭೆಯು ವಿಫಲವಾಗಿದ್ದು, ಸಾರಿಗೆ ನೌಕರರ ಸಂಘದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಆರ್. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಬಳಿ ಚಾಲಕರು ಹಾಗೂ ನಿರ್ವಾಹಕರು ಉಪವಾಸ ಸತ್ಯಾಗ್ರಹ ಆರಂಭಿಸಿದರು.

 

ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ, ಕರೆ ನೀಡಲಾಗಿರುವ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಮಂಗಳವಾರ ರಾತ್ರಿಯೇ ಚಾಲನೆ ದೊರೆಯಿತು.

ಸರ್ಕಾರವು ಶೇ 15ರಷ್ಟು ವೇತನ ಹೆಚ್ಚಳಕ್ಕೆ ಆದೇಶಿಸಿದೆ. ಇದಕ್ಕೆ ಸಮ್ಮತಿ ಇಲ್ಲ. ಮಾರ್ಚ್‌ 24ರಂದು (ಶುಕ್ರವಾರ) ಸಾರಿಗೆ ನೌಕರರ ಮುಷ್ಕರ ನಡೆಯಲಿದೆ ಎಂದು ಘೋಷಿಸಿದರು.

‘ವೇತನ ಪರಿಷ್ಕರಣೆ ಆದೇಶದಿಂದ ಸಾರಿಗೆ ನಿಗಮದ ಸಾವಿರಾರು ನೌಕರರಿಗೆ ಅನ್ಯಾಯವಾಗಿದೆ. ಶುಕ್ರವಾರದ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಡಿಕೆ ಈಡೇರುವ ತನಕ ಮುಷ್ಕರ ಮುಂದುವರಿಯಲಿದೆ. ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಚಂದ್ರಶೇಖರ್‌ ಘೋಷಿಸಿದರು.

‘ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಸಭೆಗೆ ಆಹ್ವಾನಿಸಿದ್ದರು. ಸಭೆಯಲ್ಲಿ ಚರ್ಚೆಗಿಂತ ಬೆದರಿಕೆಗಳೇ ಇದ್ದವು. ಸರ್ಕಾರಕ್ಕೆ ಚಾಲಕರು ಹಾಗೂ ನಿರ್ವಾಹಕರಿಗೆ ನ್ಯಾಯ ಕಲ್ಪಿಸುವ ಮನಸ್ಸಿದೆ. ಆದರೆ, ಹಳೆಯ ಸಂಘಟನೆಗಳ ನಾಯಕರ ಕುತಂತ್ರದಿಂದ ಅದು ಸಾಧ್ಯವಾಗಲಿಲ್ಲ’ ಎಂದು ದೂರಿದರು.

ಹೋರಾಟಕ್ಕೆ ಬೆಂಬಲ

ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆ ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರಕ್ಕೆ ಅಖಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕ ಮಹಾಮಂಡಳಿ ಬೆಂಬಲ ಘೋಷಿಸಿದೆ.

ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತಸುಬ್ಬರಾವ್‌ ಹೋರಾಟಕ್ಕೆ ಕರೆ ನೀಡಿ ಬಳಿಕ ಸರ್ಕಾರದ ಕೈಗೊಂಬೆಯಾಗಿ ಮುಷ್ಕರ ವಾಪಸ್‌ ಪಡೆದಿದ್ದಾರೆ. ಇದು ಸಾರಿಗೆ ನೌಕರರಿಗೆ ಮಾಡಿದ ಅನ್ಯಾಯ. ಮುಷ್ಕರಕ್ಕೆ ಷರತ್ತುಬದ್ಧ ಬೆಂಬಲ ನೀಡಲಾಗುವುದು ಎಂದು ಕಾರ್ಮಿಕ ಮಹಾಮಂಡಳಿ ಪ್ರಧಾನ ಕಾರ್ಯದರ್ಶಿ ಎ.ವಿ.ಬೋರಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ಸಿಬ್ಬಂದಿ ಕೆಲಸಕ್ಕೆ ಸರಿಸಮನಾದ ವೇತನ ಜಾರಿಗೆ ತರಬೇಕು. 4 ನಿಗಮಗಳಲ್ಲಿ ಸುಮಾರು 30 ವರ್ಷಗಳಿಂದಲೂ ಕಾರ್ಮಿಕ ಸಂಘಗಳಿಗೆ ಚುನಾವಣೆ ನಡೆಸಿಲ್ಲ. ಅನಂತಸುಬ್ಬರಾವ್ ಅವರು ಆಳುವ ಸರ್ಕಾರದ ಜತೆಗೆ ಕೈಜೋಡಿಸುತ್ತಾ ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಸರ್ಕಾರವು ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಶ್ರೀನಿವಾಸ್‌, ಎಸ್‌.ಉಮೇಶ್‌, ವಿ.ವಿಜಯನ್‌ ಹಾಜರಿದ್ದರು.

24ರಂದು ಸಾರಿಗೆ ಮುಷ್ಕರ ಇಲ್ಲ: ಸಿ.ಎಂ ಬೊಮ್ಮಾಯಿ

ಹುಬ್ಬಳ್ಳಿ: ‘ಸಾರಿಗೆ ನೌಕರರ ವೇತನ ಪರಿಷ್ಕರಣೆ ಆದೇಶಕ್ಕೆ ನೌಕರರ ಜಂಟಿ ಕ್ರಿಯಾ ಸಮಿತಿ ಸಹಮತ ವ್ಯಕ್ತಪಡಿಸಿದ್ದು, 24ರಂದು ಕರೆಕೊಟ್ಟಿದ್ದ ಮುಷ್ಕರವನ್ನು ಕೈಬಿಟ್ಟಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿ ತಿಳಿಸಿದರು.

ನೌಕರರ ಸಮಾನ ಮನಸ್ಕ ವೇದಿಕೆಯು ಮುಷ್ಕರಕ್ಕೆ ಕರೆ ನೀಡಿರುವ ಕುರಿತ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಶೇ 15ರಷ್ಟು ವೇತನ ಹೆಚ್ಚಳ ಆದೇಶಕ್ಕೆ ಸಹಮತ ವ್ಯಕ್ತಪಡಿಸಿ, ಜಂಟಿಕ್ರಿಯಾ ಸಮಿತಿ ಮುಖಂಡರು ನನ್ನನ್ನು ಅಭಿನಂದಿಸಿದ್ದಾರೆ. ಆದ್ದರಿಂದ ಸಾರಿಗೆ ಮುಷ್ಕರ ಇಲ್ಲ’ ಎಂದು ಪ್ರತಿಕ್ರಿಯಿಸಿದರು. ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಬೇಕು ಎಂಬ ಬೇಡಿಕೆ ಈಡೇರದ ಕಾರಣ ಮುಷ್ಕರ ಖಚಿತ ಎಂದು ಜಂಟಿ ಕ್ರಿಯಾಸಮಿತಿ ಜೊತೆಗೆ ಗುರುತಿಸಿಕೊಳ್ಳದ, ಚಂದ್ರಶೇಖರ್ ನೇತೃತ್ವದ ನೌಕರರ ಸಮಾನ ಮನಸ್ಕರ ವೇದಿಕೆ ಹೇಳಿದೆ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ