Breaking News
Home / ನವದೆಹಲಿ / ಅಕ್ರಮ ಗಣಿಗಾರಿಕೆ: ವಾರ್ಷಿಕ ₹20 ಸಾವಿರ ಕೋಟಿ ನಷ್ಟ

ಅಕ್ರಮ ಗಣಿಗಾರಿಕೆ: ವಾರ್ಷಿಕ ₹20 ಸಾವಿರ ಕೋಟಿ ನಷ್ಟ

Spread the love

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಸುಮಾರು ₹ 18 ಸಾವಿರ ಕೋಟಿಯಿಂದ ₹ 20 ಸಾವಿರ ಕೋಟಿಯಷ್ಟು ರಾಜಧನ ವರಮಾನ ನಷ್ಟವಾಗುತ್ತಿದೆ. ಅದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ (ಪಿಎಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮಹಾಲೇಖಪಾಲರು 2017-18ನೇ ಸಾಲಿನ ವರದಿಯಲ್ಲಿ ಗಣಿ ಗುತ್ತಿಗೆ ಕುರಿತು ಉಲ್ಲೇಖಿಸಿದ್ದ ಅಂಶಗಳ ಕುರಿತು ವಿಧಾನಸಭೆಯಲ್ಲಿ ಪಿಎಸಿ ಅಧ್ಯಕ್ಷ ಕೃಷ್ಣ ಬೈರೇಗೌಡ ಅವರು ಮಂಗಳವಾರ ಈ ವರದಿ ಮಂಡಿಸಿದರು.

ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ₹ 186.35 ಕೋಟಿಯನ್ನು ಮೂರು ತಿಂಗಳ ಒಳಗೆ ಬಡ್ಡಿ ಸಮೇತ ವಸೂಲು ಮಾಡಬೇಕು. ಅಲ್ಲದೆ, ತಪ್ಪಿತಸ್ಥ ಅಧಿಕಾರಿಗಳನ್ನು ಪತ್ತೆ ಮಾಡಿ ಕಠಿಣ ಶಿಸ್ತು ಕ್ರಮದ ತೆಗೆದುಕೊಳ್ಳಬೇಕು ಎಂದೂ ವರದಿ ಹೇಳಿದೆ.

ರಾಜ್ಯಕ್ಕೆ ಸೀಮಿತವಾದ ಖನಿಜ ಸಂಪನ್ಮೂಲ ಮತ್ತು ರಾಜ್ಯದ ಬೊಕ್ಕಸಕ್ಕೆ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ನಷ್ಟವನ್ನು ಗಮನದಲ್ಲಿಟ್ಟು, ಗಣಿ ಪ್ರದೇಶಗಳ ಸಮಗ್ರ ಪಟ್ಟಿಯನ್ನು ಮೂರು ತಿಂಗಳ ಒಳಗೆ ತಯಾರಿಸಬೇಕು. ಅಲ್ಲದೆ, ಉಪಗ್ರಹ ಚಿತ್ರಣದ ಸಹಾಯ ಹಾಗೂ ಜಿಪಿಎಸ್‌ ಕೋ-ಆರ್ಡಿನೇಟ್‌ಗಳನ್ನು ಜಿಐಎಸ್‌ ಮೂಲಕ ಬಳಸಿಕೊಂಡು ಕಾನೂನು ಉಲ್ಲಂಘನೆ, ನಿಯಮ ಬಾಹಿರ ಗಣಿಗಾರಿಗೆ ಪ್ರದೇಶಗಳನ್ನು ಪತ್ತೆ ಹಚ್ಚಲು ಪ್ರಬಲ ಸಾಧನವನ್ನು ರೂಪಿಸಿಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.

ಇಲಾಖೆಯ ಅಧಿಕಾರಿಗಳ ಜೊತೆ ಜಂಟಿ ಪರಿವೀಕ್ಷಣೆ ನಡೆಸಿದ್ದ ಮಹಾಲೇಖಪಾಲರು, ಕಾನೂನುಬಾಹಿರವಾಗಿ ನಡೆಯುತ್ತಿದ್ದ ಖನಿಜ ಗಣಿಗಾರಿಕೆ ಚಟುವಟಿಕೆಯನ್ನು ಕೇವಲ 29 ದಿನಗಳಲ್ಲಿ ಗುರುತಿಸಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

ಕಾನೂನುಬಾಹಿರ ಗಣಿಗಾರಿಕೆ ಪತ್ತೆ ಮಾಡಲು ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರದೇಶದ ನಕ್ಷೆ ಚಿತ್ರಗಳನ್ನು ವಿಶ್ಲೇಷಿಸಿದಾಗ ಪರವಾನಗಿ
ಯನ್ನು ಪಡೆಯದೇ ಗಣಿಗಾರಿಕೆ ನಡೆಸುತ್ತಿರುವುದರಿಂದ ₹166.80 ಕೋಟಿಯಿಂದ ₹667.20 ಕೋಟಿ ಹಾಗೂ ಗುತ್ತಿಗೆ ಸೀಮೆ ಮೀರಿ ಹೊರ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ₹ 415.20 ಕೋಟಿಯಿಂದ ₹1660.80 ಕೋಟಿ ರಾಜಧನ ವರಮಾನ
ನಷ್ಟವನ್ನು ಮಹಾಲೇಖಪಾಲರು ಅಂದಾಜಿಸಿದ್ದರು. ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ವಿಶ್ಲೇಷಣೆ ನಡೆಸಿದರೆ, ಬೊಕ್ಕಸಕ್ಕೆ ಭಾರಿ ಪ್ರಮಾಣದ ಆದಾಯ ನಷ್ಟ ಆಗುತ್ತಿರುವ ಬಗ್ಗೆ ಸಮಿತಿ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.

ಅನುದಾನ: ಆಯಾ ವರ್ಷದಲ್ಲೇ ಬಳಸುವಂತೆ ಸೂಚಿಸಿ’

ಆರ್ಥಿಕ ಇಲಾಖೆಗೆ ಸಂಬಂಧಿಸಿದಂತೆ 2011-12ರಿಂದ 2019-29ನೇ ಸಾಲಿನವರೆಗಿನ ಮಹಾಲೇಖಪಾಲರ ವರದಿಗೆ ಸಂಬಂಧಿಸಿದಂತೆ ವರದಿ ಮಂಡಿಸಿರುವ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅನುದಾನ ಬಿಡುಗಡೆಯಾದ ವರ್ಷದಲ್ಲೇ ಅದನ್ನು ಬಳಕೆ ಮಾಡುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅನುದಾನ ಬಿಡುಗಡೆಯಾದ 18 ತಿಂಗಳಲ್ಲಿ ಬಳಕೆ ಪ್ರಮಾಣಪತ್ರಗಳನ್ನು ಮಹಾಲೇಖಪಾಲರಿಗೆ ಸಲ್ಲಿಸುವುದು ಕಡ್ಡಾಯ. ಆದರೆ, 2019-20ರ ಅಂತ್ಯಕ್ಕೆ 51 ಪ್ರಕರಣಗಳಲ್ಲಿ ₹ 182.49 ಕೋಟಿ ಮೊತ್ತದ ಅನುದಾನಗಳಿಗೆ ಸಂಬಂಧಿಸಿದ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಹಲವು ವರ್ಷಗಳಿಂದ ಭಾರೀ ಪ್ರಮಾಣದ ಬಿಲ್‌ಗಳು ಇತ್ಯರ್ಥವಾಗದೆ ಉಳಿದಿವೆ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವೇತನವನ್ನು ತಡೆಹಿಡಿಯುವ ಜೊತೆಗೆ, ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.


Spread the love

About Laxminews 24x7

Check Also

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ’ : ನಿರ್ಮಲಾ ಸೀತಾರಾಮನ್ ಘೋಷಣೆ

Spread the loveನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಣಕಾಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ