Home / ರಾಜಕೀಯ / 20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಬಿಳಿ ಕಾಗೆ! ಕೇಂದ್ರ ಬಜೆಟ್​​ಗೆ ಟೀಕೆ, ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟ ಕಾಂಗ್ರೆಸ್

20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಬಿಳಿ ಕಾಗೆ! ಕೇಂದ್ರ ಬಜೆಟ್​​ಗೆ ಟೀಕೆ, ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟ ಕಾಂಗ್ರೆಸ್

Spread the love

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು 2023-24ನೇ ಸಾಲಿನ ಬಜೆಟ್‌ (India Budget 2023) ಮಂಡನೆ ಮಾಡಿದ್ದಾರೆ. ಬಜೆಟ್​ ಬಳಿಕ ಸಹಜವಾಗಿಯೇ ಒಂದಷ್ಟು ವಲಯಗಳಿಗೆ ಬಿಸಿ ಏರಿಕೆಯ ಬಿಸಿ ತಟ್ಟಿದರೆ, ಇನ್ನೊಂದಷ್ಟು ವಲಯಗಳಿಗೆ ನಿಟ್ಟುಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರು ಬಜೆಟ್‌ನ್ನು (Budget 2023) ವಿರೋಧಿಸಿ ಟೀಕೆಗಳ ಸುರಿಮಳೆಯನ್ನೇ ಮಾಡಿದ್ದಾರೆ.

20 ಲಕ್ಷ ಕೋಟಿ ಪ್ಯಾಕೇಜ್ ಎಂಬ ಬಿಳಿ ಕಾಗೆ!

ಕೇಂದ್ರ ಬಜೆಟ್​ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಕೇಂದ್ರ ಸರಕಾರದ ಬಜೆಟ್ “ಸೀಡ್‌ಲೆಸ್ ಕಡಲೆಕಾಯಿ” ಇದ್ದಂತಿದೆ! ’20 ಲಕ್ಷ ಕೋಟಿ ಪ್ಯಾಕೇಜ್’ ಎಂಬ ಬಿಳಿ ಕಾಗೆ ತೋರಿಸಿದಂತೆಯೇ ಈ ಬಜೆಟ್ ಕೂಡ. ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಯುವಸಮುದಾಯಕ್ಕೆ ಯಾವುದೇ ಭರವಸೆ ಇಲ್ಲ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮವಿಲ್ಲ. ಜನರ ಸಂಕಷ್ಟ ಕಡಿಮೆಯಾಗಬಹುದೆಂಬ ನಿರೀಕ್ಷೆ ಹುಸಿಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ.

ಡಬಲ್ ಇಂಜಿನ್ ಸರ್ಕಾರ ಎಂದುಕೊಳ್ಳುವ ಕರ್ನಾಟಕ ಬಿಜೆಪಿ ಸರ್ಕಾರ ಈ ಬಗ್ಗೆ ಉತ್ತರಿಸಬೇಕು. ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏನೂ ಸಿಗದಿರುವುದೇಕೆ? 23 ಸಾವಿರ ಕೋಟಿ ಅಗತ್ಯವಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇವಲ 5,300 ಕೋಟಿ ನೀಡಿ ಮೂಗಿಗೆ ತುಪ್ಪ ಸವರಿದ್ದೇಕೆ? ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಚಕಾರ ಎತ್ತದಿರುವುದೇಕೆ?

ಸಬ್ ಅರ್ಬನ್ ರೈಲು ಕಾಮಗಾರಿಗೆ ನಿಗದಿಪಡಿಸಿದ್ದ ಕಾಲಮಿತಿ ಮುಗಿಯುತ್ತಿದೆ, 18 ಸಾವಿರ ಕೋಟಿಯ ಯೋಜನೆಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಹಣ ನೀಡಿದ್ದು, ಕರ್ನಾಟಕದೆಡೆಗೆ ಕೇಂದ್ರ ಸರ್ಕಾರಕ್ಕಿರುವ ತಾತ್ಸಾರ ಮನೋಭಾವಕ್ಕೆ ನಿದರ್ಶನ. ನಿಗದಿತ ಕಾಲಮಿತಿಯಲ್ಲಿ ಖಂಡಿತವಾಗಿಯೂ ಪೂರ್ಣಗೊಳಿಸುವ ಇರಾದೆ ಬಿಜೆಪಿಗಿಲ್ಲ.

ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ

ಕರ್ನಾಟಕ ರೈತರ ಆತ್ಮಹತ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದ ರೈತರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಕೃಷಿ ಡಿಜಿಟಲೀಕರಣ ಎಂಬ ಆಕರ್ಷಕ ಪದವನ್ನು ಪರಿಚಯಿಸಿದಾಕ್ಷಣ ರೈತರ ಸಮಸ್ಯೆ ಬಗೆಹರಿಯದು. ಬೆಳೆಯನ್ನು ಡಿಜಿಟಲ್ ತಾಂತ್ರಿಕತೆಯಲ್ಲಿ ಬೆಳೆಯಲಾಗದು ಎಂಬ ವಾಸ್ತವು ಪ್ರಧಾನಿಗೆ ತಿಳಿದಂತಿಲ್ಲ! ಮಧ್ಯಮ ವರ್ಗ ಆದಾಯವನ್ನೇ ಕಳೆದುಕೊಂಡಿದೆ, ಜನರ ಆದಾಯಕ್ಕೆ ಹೊಡೆತ ಕೊಟ್ಟು ಆದಾಯ ತೆರಿಗೆ ಮಿತಿ ಏರಿಸಿದರೆ ಪ್ರಯೋಜನವೇನು?! ಜನರ ಆದಾಯವನ್ನು ವೃದ್ಧಿಸುವ ವಾತಾವರಣ ಸೃಷ್ಟಿಸುವಲ್ಲಿ ಬಜೆಟ್ ವಿಫಲವಾಗಿದೆ.
 

ಸಿರಿಧಾನ್ಯ ಈಗ ಶ್ರೀಅನ್ನ! ಹೆಸರು ಬದಲಾವಣೆ ಅಷ್ಟೇ, ಉಳಿದಂತೆ ರೈತರ ನೆರವಿಗೆ ಯಾವುದೇ ಸ್ಪಷ್ಟತೆ ಇಲ್ಲ. ಯುವಕರಿಗೆ ಉದ್ಯೋಗ ಸೃಷ್ಟಿಸುವ ತುರ್ತಿದೆ ಎನ್ನುವುದು ಮೋದಿ ಅವರಿಗೆ ಇನ್ನೂ ಅರ್ಥವಾದಂತಿಲ್ಲ. ಉದ್ಯೋಗ ಸೃಷ್ಟಿಯ ಯಾವುದೇ ಅಂಶವಿಲ್ಲದಿರುವುದು ಬಿಜೆಪಿ ಯುವಸಮುದಾಯದ ವಿರೋಧಿ ಎಂಬುದಕ್ಕೆ ಸಾಕ್ಷಿ.

ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ. ಬರುವ ಆದಾಯವನ್ನೆಲ್ಲಾ ಸರ್ಕಾರವೇ ದರೋಡೆ ಮಾಡುತ್ತಿರುವಾಗ ಮಹಿಳೆಯರು ಉಳಿತಾಯ ಮಾಡುವುದು ಏನನ್ನು? ಸಂಪಡನೆಗಿಂತ ಖರ್ಚು ಹೆಚ್ಚಿರುವಾಗ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಪ್ರಯೋಜನವೇನು? ಆಕರ್ಷಕ ಹೆಸರು ಘೋಷಿಸಿದ ಮಾತ್ರಕ್ಕೆ ಜನರ ಕಷ್ಟ ದೂರಾಗದು ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ