Breaking News
Home / ರಾಜಕೀಯ / ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆ; ಅ.2ರಂದು ಬೆಂಗಳೂರಿನಲ್ಲಿ ಸಿ.ಎಂ ಚಾಲನೆ

ರಾಜ್ಯದಾದ್ಯಂತ ವೀರಜ್ಯೋತಿ ಯಾತ್ರೆ; ಅ.2ರಂದು ಬೆಂಗಳೂರಿನಲ್ಲಿ ಸಿ.ಎಂ ಚಾಲನೆ

Spread the love

ನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಈ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ₹2 ಕೋಟಿ ಅನುದಾನ ಮಂಜೂರು ಮಾಡಿದ್ದು, ಅ.23, 24 ಹಾಗೂ 25ರಂದು ಮೂರು ದಿನ ವೈಭವ ಮರುಕಳಿಸಲಿದೆ ಎಂದು ಶಾಸಕ ಮಹಾಂತೇಶ ದೊಡ್ಡಗೌಡ್ರ ತಿಳಿಸಿದರು.

 

ಪಟ್ಟಣದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸಲಿರುವ ವೀರಜ್ಯೋತಿಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.2ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದರು.

ವೀರಜ್ಯೋತಿ ಯಾತ್ರೆಯನ್ನು ಎಲ್ಲ ಜಿಲ್ಲೆಗಳಲ್ಲಿ ಅತ್ಯಂತ ಗೌರವಯುತವಾಗಿ ಸ್ವಾಗತಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಲಿದೆ ಎಂದು ಶಾಸಕ ಹೇಳಿದರು.

ಪ್ರತಿಯೊಬ್ಬರು ಸ್ವಯಂಪ್ರೇರಣೆಯಿಂದ ಉತ್ಸವದಲ್ಲಿ ಭಾಗವಹಿಸುವ ಮೂಲಕ ಕಿತ್ತೂರು ಉತ್ಸವವನ್ನು ಸಂಭ್ರಮದಿಂದ ಆಚರಿಸೋಣ ಎಂದು ಮನವಿ ಮಾಡಿಕೊಂಡರು.

ಈಗಾಗಲೇ ₹1 ಕೋಟಿ ಬಿಡುಗಡೆಯಾಗಿದೆ. ಉಳಿದ ಅನುದಾನ ಬಿಡುಗಡೆ ಉತ್ಸವ ಆರಂಭಗೊಳ್ಳುವ ವೇಳೆಗೆ ಬಿಡುಗಡೆಯಾಗಲಿದೆ ಎಂದರು.

ಮೂರು ವೇದಿಕೆ- ವಿಶಿಷ್ಟ ವಸ್ತುಪ್ರದರ್ಶನ:

ಈ ಬಾರಿ ಉತ್ಸವದಲ್ಲಿ ಮೂರು‌ ವೇದಿಕೆ ನಿರ್ಮಿಸಲಾಗುವುದು. ಮಹಿಳೆಯರಿಗಾಗಿ ಒಂದು ದಿನದ ಕಾರ್ಯಕ್ರಮ ಮೀಸಲಿಡಲು ನಿರ್ಧರಿಸಲಾಗಿದೆ. ಇದೇ ರೀತಿ ವಿವಿಧ ಬಗೆಯ ಕ್ರೀಡೆಗಳನ್ನು ಆಯೋಜಿಸಲಾಗುವುದು. ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ದೊರಕಲಿದೆ ಎಂದು ದೊಡ್ಡಗೌಡ್ರ ಹೇಳಿದರು.

ಆಹಾರ ಮೇಳ, ಫಲ- ಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಬಗೆಯ ವಸ್ತುಪ್ರದರ್ಶನ ಹಾಗೂ ಮೇಳ ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಇದಲ್ಲದೇ ಮೂರು ದಿನಗಳ ಕಾಲ ಷಟ್ಟಣವದಲ್ಲಿ ದೀಪಾಲಂಕಾರ ಮಾಡಲು ಟೆಂಡರ್ ನೀಡಲಾಗುವುದು ಎಂದು ತಿಳಿಸಿದರು.

ಐತಿಮಾಸಿಕ ಕಿತ್ತೂರು ಪಟ್ಟಣ ಮತ್ತು ಕೋಟೆಯ ಆವರಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು.
ಚನ್ನಮ್ಮ ಉತ್ಸವದಲ್ಲಿ ವಿವಿಧ ಸಮಿತಿಗಳಲ್ಲಿ ಕೆಲಸ ನಿರ್ವಹಿಸಲು ಅನುಕೂಲವಾಗುವಂತೆ ಹೆಸರು ನೋಂದಾಯಿಸಲು ತಹಶೀಲ್ದಾರ್ ಕಚೇರಿಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದು ತಿಳಿಸಿದರು.

ಉತ್ಸವ ಯಶಸ್ವಿಗೆ ಪೂರ್ವಸಿದ್ಧತೆ:

ಕಿತ್ತೂರು ಉತ್ಸವ ಮೊದಲ ಬಾರಿಗೆ ರಾಜ್ಯಮಟ್ಟದ ಉತ್ಸವವಾಗಿ ಘೋಷಣೆಯಾಗಿದೆ. ಇದರ ಸಂಪೂರ್ಣ ಯಶಸ್ಸಿಗೆ ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಉತ್ಸವದ ಸಾಂಸ್ಕೃತಿಕ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾಂಸ್ಕೃತಿಕ ಸಮಿತಿಯು ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಗೆ ಅವಕಾಶ ನೀಡಲಿದೆ. ಮೂರು ವೇದಿಕೆಗಳನ್ನು ವಿಶೀಷವಾಗಿ ನಿರ್ಮಿಸಲಾಗುವುದು. ಇತಿಹಾಸ ತಜ್ಞರ ಜತೆ ಚರ್ಚಿಸಿ ಈ‌ ವೇದಿಕೆಗಳಿಗೆ ಹೆಸರುಗಳನ್ನು ಇಡಲಾಗುವುದು ಎಂದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೂ ಸೇರಿದಂತೆ ಯಾರನ್ನೆಲ್ಲ ಆಹ್ವಾನಿಸಬೇಕು ಎಂದು ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಚನ್ನಮ್ಮ ಜನ್ಮಸ್ಥಳ ಅಭಿವೃದ್ಧಿಗೆ ಕ್ರಮ:

ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿರುವ ರಾಣಿ ಚನ್ನಮ್ಮನ ಜನ್ಮಸ್ಥಳವಾಗಿರುವ ವಾಡೆ ಖರೀದಿಸಲು ಸರ್ಕಾರ ₹30 ಲಕ್ಷ ಅನುದಾನ ಒದಗಿಸಿದೆ. ಇದರ ವಾರಸುದಾರರು ಇದ್ದಾರೆ. ಅವರೊಂದಿಗೆ ಚರ್ಚೆ ನಡೆದಿದೆ.
ಆದಷ್ಟು ಬೇಗನೇ ಆ ಜಾಗವನ್ನು ಖರೀದಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಸಭೆಯ ಸಾನ್ನಿಧ್ಯ ವಹಿಸಿದ್ದ ಕಿತ್ತೂರು ಕಲ್ಮಠದ ರಾಜಯೋಗೀಂದ್ರ ಮಡಿವಾಳೇಶ್ವರ ಸ್ವಾಮೀಜಿ ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮನ ಉತ್ಸವ ನಮ್ಮ ಭಾಗದ ಹೆಮ್ಮೆಯ ಪ್ರತೀಕ. ಪ್ರಸಕ್ತ ವರ್ಷ ಮೂರು‌ ವೇದಿಕೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಕೂಡ ಆಯೋಜಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಡಿವೈಎಸ್ಪಿ ಶಿವಾನಂದ ಕಟಗಿ, ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಉಳಿವೆಪ್ಪ ಉಳ್ಳಾಗಡ್ಡಿ, ಮುತ್ನಾಳ, ಡಿಡಿಪಿಐ ಬಸವರಾಜ ನಾಲತವಾಡ ಮತ್ತಿತರರು ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ ಸ್ವಾಗತಿಸಿದರು.

ಉತ್ಸವದ ಯಶಸ್ವಿಗಾಗಿ ರಚಿಸಲಾಗಿರುವ 15 ವಿವಿಧ ಉಪ ಸಮಿತಿಯ ಕುರಿತು ಮಾಹಿತಿಯನ್ನು ನೀಡಿದರು.

ನಾಗರಿಕರ ಸಲಹೆ- ಸೂಚನೆಗಳು:

* ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿ ಅವರನ್ನು ಉತ್ಸವಕ್ಕೆ ಆಹ್ವಾನಿಸಬೇಕು.

* ಪ್ರತಿಯೊಬ್ಬರಿಗೂ ಕಾರ್ಯಕ್ರಮ ಪಟ್ಟಿ ತಲುಪಿಸಲು ಕರಪತ್ರಗಳನ್ನು ಮುದ್ರಿಸಿ ಹಂಚಬೇಕು.

* ಸ್ವಾತಂತ್ರ್ಯ ಯೋಧರು- ವೀರಸೈನಿಕರನ್ನು ಸನ್ಮಾನಿಸಬೇಕು.

* ಕೃಷಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಬೇಕು.

* ಸೇನಾ ದಂಡ ನಾಯಕರಾಗಿದ್ದ ಸರದಾರ ಗುರುಶಿದ್ದಪ್ಪನವರ ತ್ಯಾಗ- ಬಲಿದಾನದ ಮೇಲೆ ಬೆಳುಕು ಚೆಲ್ಲುವ ಕೆಲಸವಾಗಬೇಕು.

* ಚನ್ನಮ್ಮನ ಜನ್ಮಸ್ಥಳ ಕಾಕತಿಯಲ್ಲಿ ಅಭಿವೃದ್ಧಿ ಕೆಲಸವಾಗಬೇಕು.

* ಉತ್ಸವದ ಸಂದರ್ಭದಲ್ಲಿ ಪಟ್ಟಣದ ಸ್ವಚ್ಛತೆ ಹಾಗೂ ಮೂಲಸೌಕರ್ಯವನ್ನು ಒದಗಿಸಬೇಕು.

* ದಸರಾ ಕ್ರೀಡಾಕೂಟ ಮಾದರಿಯಲ್ಲಿ ಕ್ರೀಡೆಗಳನ್ನು ಏರ್ಪಡಿಸಬೇಕು


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ