Breaking News
Home / ರಾಜಕೀಯ / 5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆ ಹಾನಿ: ಮಳೆ, ರೋಗಬಾಧೆಗೆ ತುತ್ತಾದ ದ್ರಾಕ್ಷಿ

5 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬೆಳೆ ಹಾನಿ: ಮಳೆ, ರೋಗಬಾಧೆಗೆ ತುತ್ತಾದ ದ್ರಾಕ್ಷಿ

Spread the love

ಹುಬ್ಬಳ್ಳಿ: ಇತ್ತೀಚೆಗೆ ಸುರಿದ ಮಳೆ, ಮೋಡ ಕವಿದ ವಾತಾವರಣ ಹಾಗೂ ರೋಗಬಾಧೆಯಿಂದ ರಾಜ್ಯದಲ್ಲಿ ದ್ರಾಕ್ಷಿ ಬೆಳೆ ಅಪಾರ ಹಾನಿಗೊಳಗಾಗಿದೆ. ದ್ರಾಕ್ಷಿ ಬೆಳೆಯುವ ಸುಮಾರು 32,000 ಹೆಕ್ಟೇರ್‌ ಪ್ರದೇಶದ ಪೈಕಿ ಶೇ 60ರಿಂದ ಶೇ 65ರಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

 

ರಾಜ್ಯದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆಯಲ್ಲಿ ಅಂದಾಜು 26,500 ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ಉಳಿದಂತೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಬೆಳೆಯಲಾಗುತ್ತಿದೆ.

ಸಾಮಾನ್ಯವಾಗಿ ದ್ರಾಕ್ಷಿ ಗಿಡವನ್ನು ಚಾಟ್ನಿ (ಪ್ರುನಿಂಗ್‌) ಮಾಡಿದ 30ರಿಂದ 40 ದಿನಗಳಲ್ಲಿ ಹೂವು ಬಿಟ್ಟು, ಕಾಯಿ ಕಟ್ಟುತ್ತವೆ. ಇದೇ ಅಂದಾಜಿನ ಮೇಲೆ ರೈತರು ಕಳೆದ ತಿಂಗಳು ಚಾಟ್ನಿ ಮಾಡಿದ್ದರು. ಈ ತಿಂಗಳ ಮೊದಲ ವಾರದಿಂದ ಹೂವು ಅರಳುವ ಹಾಗೂ ಕಾಯಿ ಕಟ್ಟುವ ವೇಳೆ ಮಳೆಯಾಗಿರುವುದು ಹಾನಿಗೆ ಕಾರಣವಾಗಿದೆ.

‘ಪ್ರತಿಕೂಲ ಹವಾಮಾನದಿಂದಾಗಿ ಶಿಲೀಂಧ್ರ ರೋಗ (ಡೌನಿ ಮಿಲ್ಡ್ಯೂ), ಕೊಳೆ ರೋಗ ಕಾಣಿಸಿಕೊಂಡಿದೆ. ಹೂ ಹಂತದಲ್ಲಿ ರೋಗ ಬಾಧೆಯಿಂದ ಗೊಂಚಲುಗಳಲ್ಲಿನ ಕಾಯಿಗಳು ಸುಟ್ಟು ಕರಕಲಾಗಿ ಉದುರುತ್ತಿವೆ. ಸದ್ಯದ ಸ್ಥಿತಿ ನೋಡಿದರೆ ಮಾಡಿದ ಖರ್ಚು ಸಿಗುವುದೂ ಅನುಮಾನ. ಚಾಟ್ನಿ, ಕಡ್ಡಿ ತಯಾರಿಕೆ, ಗೊಬ್ಬರ, ಔಷಧಿ ಸೇರಿ ಎಕರೆಗೆ ₹ 1.50 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ನಷ್ಟಕ್ಕೆ ಸಿಲುಕಿದ್ದೇವೆ’ ಎಂದು ಬೆಳಗಾವಿ ಜಿಲ್ಲೆಯ ತೆಲಸಂಗದ ರೈತ ಸುನೀಲ ಕಾಳೆ ಅಳಲು ತೋಡಿಕೊಂಡರು. ಅಥಣಿ, ಕಾಗವಾಡ ತಾಲ್ಲೂಕಿನ ರೈತರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 4,688 ಮಂದಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ದ್ರಾಕ್ಷಿ ಕಣಜ ಎಂದೇ ಹೆಸರಾದ ವಿಜಯಪುರ ಜಿಲ್ಲೆಯ ರೈತರ ಸ್ಥಿತಿ ಇನ್ನೂ ಶೋಚನೀಯವಾಗಿದೆ. ತಿಕೋಟಾ, ಬಬಲೇಶ್ವರ, ಬಾಬಾನಗರ, ಬಿಜ್ಜರಗಿ, ನಿಡೋಣಿ, ಹೊರ್ತಿ, ದೇವರ ಹಿಪ್ಪರಗಿ, ಮನಗೂಳಿ ಭಾಗದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಮಳೆಯಿಂದ ಈಗಾಗಲೇ ಹಣ್ಣಾಗಿರುವ ದ್ರಾಕ್ಷಿ ಸೀಳು ಬಿಟ್ಟಿವೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಹೋಬಳಿಯಲ್ಲಿ ಮೊಗ್ಗು ಮತ್ತು ಎಳೆಕಾಯಿಗಳು ಉದುರಿ ಬಿದ್ದಿವೆ. ಸಾವಳಗಿ ಭಾಗದ 2,900 ಹೆಕ್ಟೇರ್ ಪ್ರದೇಶದ ದ್ರಾಕ್ಷಿಯಲ್ಲಿ ಶೇ 70 ರಷ್ಟು ನಾಶವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ತೀವ್ರವಾಗಿ ಕಾಣಿಸಿಕೊಂಡಿರುವ ಶಿಲೀಂಧ್ರ ರೋಗವನ್ನು ನಿಯಂತ್ರಿಸಲು ಬೆಳೆಗಾರರು ಹೇರಳವಾಗಿ ಔಷಧಿ ಸಿಂಪಡಿಸುತ್ತಿದ್ದಾರೆ. ದ್ರಾಕ್ಷಿ ಕಡ್ಡಿ ಉಳಿಸಿಕೊಂಡರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ.

‘1984ರಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಈಗ 10 ಎಕರೆಯಲ್ಲಿ ದ್ರಾಕ್ಷಿ ಇದೆ. ವಾಡಿಕೆಗಿಂತ ಮೂರ್ನಾಲ್ಕು ಪಟ್ಟು ಮಳೆ ಹೆಚ್ಚಾಗಿದೆ. ಶಿಲೀಂಧ್ರ ರೋಗ ವ್ಯಾಪಿಸಿದೆ. ಲಾಭ ಬರದಿದ್ದರೂ ಪರವಾಗಿಲ್ಲ ದ್ರಾಕ್ಷಿ ಕಡ್ಡಿಗಳು ಉಳಿದರೆ ಸಾಕು ಎನಿಸಿದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರ ತಾಲ್ಲೂಕು ಅಜ್ಜಾವರ ಗ್ರಾಮದ ರೈತ ಕೆ.ಆರ್.ರೆಡ್ಡಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ತಾಲ್ಲೂಕಿನಲ್ಲಿಯೂ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಪಾನೀಯ ತಯಾರಿಸಲು ಬಳಸುವ ನೀಲಿಬಣ್ಣದ ದ್ರಾಕ್ಷಿ ಬೆಳೆ ಪೂರ್ಣವಾಗಿ ಹಾಳಾಗಿದೆ.

ಅಧ್ಯಯನ ತಂಡ: ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಜಯಪುರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್‌.ಎಂ.ಬರಗಿಮಠ, ದ್ರಾಕ್ಷಿ ಬೆಳೆ ಹಾನಿ ಕುರಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದೆ. ವರದಿ ಕೊಟ್ಟ ಬಳಿಕ ಎಷ್ಟು ಪ್ರಮಾಣದಲ್ಲಿ ಬೆಳೆ ನಷ್ಠವಾಗಿದೆ ಎಂಬ ಲೆಕ್ಕ ಸಿಗಲಿದೆ ಎಂದರು.

ಪ್ಯಾಕೇಜ್‌ಗೆ ಬೆಳೆಗಾರರ ಆಗ್ರಹ

ಮಳೆ, ಮೋಡದಿಂದ ನಷ್ಟಕ್ಕೊಳಗಾದ ದ್ರಾಕ್ಷಿ ಬೆಳೆಗಾರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್‌. ಮುಂಬಾರೆಡ್ಡಿ ಆಗ್ರಹಿಸಿದರು.

ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಹೆಕ್ಟೇರ್‌ಗೆ ₹ 18 ಸಾವಿರ ಮಾತ್ರ ಪರಿಹಾರ ಸಿಗಲಿದೆ. ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಪರಿಹಾರ ದೊರೆಯಲಿದೆ. ಇದು ಯಾವುದಕ್ಕೂ ಸಾಲದು. ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಅಡಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಅವರು ಒತಾಯಿಸಿದರು.

ಕಳೆದ ವರ್ಷದ 2020-21ನೇ ಸಾಲಿನ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂಕಿ- ಅಂಶ

ಜಿಲ್ಲೆ; ದ್ರಾಕ್ಷಿ ಬೆಳೆಯುವ ಪ್ರದೇಶ

ವಿಜಯಪುರ; 17,000

ಬೆಳಗಾವಿ; 5,200

ಬಾಗಲಕೋಟೆ; 2,900

ಚಿಕ್ಕಬಳ್ಳಾಪುರ; 2,800

ಬೆಂಗಳೂರು ಗ್ರಾಮಾಂತರ ಜಿಲ್ಲೆ; 2,197


Spread the love

About Laxminews 24x7

Check Also

ಬೆಳಗಾವಿ ಲೋಕಸಭಾ ಚುನಾವಣೆಗೆ ಒಪ್ತಾರಾ ಯತ್ನಾಳ್? ಏನು ಬಿಎಲ್ ಸಂತೋಷ್ ತಂತ್ರಗಾರಿಕೆ?

Spread the loveಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಬೆಳಗಾವಿಯ ಬಿಜೆಪಿ ಅಭ್ಯರ್ಥಿ (Belagavi …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ