Breaking News
Home / ಜಿಲ್ಲೆ / ಬೆಳಗಾವಿ / ಕಿತ್ತೂರು ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ

ಕಿತ್ತೂರು ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ

Spread the love

ಬೆಳಗಾವಿ: ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮನ ಸೈನ್ಯದ ವಿಜಯೋತ್ಸವದ ಸವಿ ನೆನಪಿಗಾಗಿ ಆಚರಿಸಲ್ಪಡುವ ಕಿತ್ತೂರ ಉತ್ಸವಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಕೊರೊನಾದ ಸಂಕಷ್ಟದ ಸಮಯದಲ್ಲೂ ಎರಡು ದಿನಗಳ ಕಾಲ ಉತ್ಸವವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳು ನಡೆದಿವೆ.

ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜನರ ಮನತಣಿಸಲಿವೆ. ಸೋಮವಾರ ಬೆಳಗಾವಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿನಾಂಕ 23 ರಂದು ಸಂಜೆ 7 ಗಂಟೆಗೆ ಈ ಉತ್ಸವವನ್ನು ಉದ್ಘಾಟಿಸಲಿದ್ದು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದರು.

ದಿ. 23 ರಂದು ಬೆಳಿಗ್ಗೆ 10 ಗಂಟೆಗೆ ವೀರರಾಣಿ ಚೆನ್ನಮ್ಮ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಬರಮಾಡಿಕೊಂಡು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 10.30 ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಅವರು ಜಾನಪದ ಕಲಾವಾಹಿನಿ ಉದ್ಘಾಟನೆ ನೆರವೇರಿಸುವರು. ಇದೇ ವೇಳೆ ಬೆಳಿಗ್ಗೆ 9 ಗಂಟೆಗೆ ಚನ್ನಮ್ಮನ ಜನ್ಮಸ್ಥಾನ ಬೆಳಗಾವಿ ಸಮೀಪದ ಕಾಕತಿಯಲ್ಲಿ ರಾಣಿ ಚೆನ್ನಮ್ಮ ಮೂರ್ತಿಯ ಪೂಜೆ ನಡೆಯಲಿದೆ. ಕಾಕತಿಯ ಶಿವಪೂಜಾಮಠದ ರಾಚಯ್ಯ ಸ್ವಾಮಿಗಳು, ಕಾಕತಿಯ ಉದಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11 ಗಂಟೆಗೆ ಕಿತ್ತೂರಿನ ಕೆಎನ್‌ವಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನವನ್ನು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸುವರು. ಸಂಜೆ 7 ಗಂಟೆಗೆ ಕಿತ್ತೂರು ಕೋಟೆ ಆವರಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಭಾರತ ಸ್ವಾತಂತ್ರÂದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮಾಜಿ ಅವರ 25 ನೇ ಉತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

ಸಚಿವರಾದ ಸುನೀಲಕುಮಾರ, ಗೋವಿಂದ ಕಾರಜೋಳ, ಉಮೇಶ ಕತ್ತಿ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಆನಂದ ಸಿಂಗ್‌ ಭಾಗವಹಿಸಲಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌಡರ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರಗತಿಪರ ರೈತ ಮಹಿಳೆ, ರಾಯಚೂರು ಜಿಲ್ಲೆಯ ಕವಿತಾಳದ ಕವಿತಾ ಮಿಶ್ರಾ ಹಾಗೂ ರಾಣಿ ಚನ್ನಮ್ಮನ ವಂಶಸ್ಥರಾದ ಖಾನಾಪುರದ ಬಾಳಾಸಾಹೇಬ ದೇಸಾಯಿ ಅವರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು.

ಸಮಾರಂಭದ ಮುಖ್ಯ ವೇದಿಕೆಯಲ್ಲಿ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳಿಯಿಂದ ಭಜನಾ ಪದ, ಸಾಣಿಕೊಪ್ಪದ ಪವಾಡ ಬಸವೇಶ್ವರ ನಾಟ್ಯಸಂಘದಿಂದ ಶ್ರೀಕೃಷ್ಣ ಪಾರಿಜಾತ ಬಯಲಾಟ, ವಿಜಯಪುರದ ಗಿರಿಮಲ್ಲಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ, ಬೆಳಗಾವಿಯ ರಾಜಪ್ರಭು ಧೋತ್ರೆ ಸುಗಮ ಸಂಗೀತ, ಲೋಕಾಪುರದ ಮಂಜುಳಾ ಸಂಬಾಳಮಠ ಅವರಿಂದ ಜಾನಪದ ಸಂಗೀತ, ಬಾಗಲಕೋಟೆಯ ಶ್ರೇಯಾ ಪ್ರಹ್ಲಾದ ಕುಲಕರ್ಣಿ ಅವರಿಂದ ಭರತನಾಟ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿಯ ಉತ್ಸವದಲ್ಲಿ ಕುಸ್ತಿ ಸ್ಪರ್ಧೆಗಳನ್ನು ಕೈಬಿಡಲಾಗಿದೆ. ಆದರೆ ಸೈಕ್ಲಿಂಗ್‌, ವಾಲಿಬಾಲ್‌ ಸ್ಪರ್ಧೆಗಳು ನಡೆಯಲಿವೆ.

ದಿನಾಂಕ 24 ರಂದು ಬೆಳಿಗ್ಗೆ 7 ಗಂಟೆಗೆ ಸೈಕ್ಲಿಂಗ್‌ ಸ್ಪರ್ಧೆಗಳು ನಡೆಯಲಿದ್ದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಉಳವಪ್ಪ ಉಳ್ಳಿಗಡ್ಡಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಕಿತ್ತೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಮುಕ್ತ ವಾಲಿಬಾಲ್‌ ಸ್ಪರ್ಧೆಗಳು ನಡೆಯಲಿದ್ದು, ಕಿತ್ತೂರ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಚಿನ್ನಪ್ಪ ಮುತ್ನಾಳ ಸ್ಪರ್ಧೆಗಳನ್ನು ಉದ್ಘಾಟಿಸುವರು. 24 ರಂದು ಬೆಳಿಗ್ಗೆ 10 ಗಂಟೆಗೆ ಮುಖ್ಯವೇದಿಕೆಯಲ್ಲಿ ನಡೆಯುವ ವಿಚಾರ ಸಂಕಿರಣವನ್ನು ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸಲಿದ್ದಾರೆ.

ಧಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ| ಆರ್‌ ಎಂ ಷಡಕ್ಷರಯ್ಯ ಆಶಯ ಭಾಷಣ ಮಾಡಲಿದ್ದಾರೆ. ನಂತರ ವಿವಿಧ ವಿಷಯಗಳ ಕುರಿತು ಏಳು ಗೋಷ್ಠಿಗಳು ನಡೆಯಲಿವೆ. ನಂತರ ಮಧ್ಯಾಹ್ನ 3 ಗಂಟೆಯಿಂದ ವಿವಿಧ ಕಲಾವಿದರಿಂದ ಶಹನಾಯಿ, ಗಾಯನ, ಜಾನಪದ ಸಂಗೀತ, ನೃತ್ಯ, ನೃತ್ಯ ರೂಪಕ, ರಾಜಣ್ಣ ಜೇವರ್ಗಿ ತಂಡದವರಿಂದ ನಾಟಕ, ವಚನ ಸಂಗೀತ, ನೃತ್ಯ ವೈವಿಧ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಾದ ಬಳಿಕ ರಾತ್ರಿ 9.15 ರಿಂದ ಖ್ಯಾತ ಗಾಯಕ ವಿಜಯಪ್ರಕಾಶ ಹಾಗೂ ತಂಡದವರು ನಡೆಸಿಕೊಡುವ ರಸಮಂಜರಿ ಕಾರ್ಯಕ್ರಮ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಸಂಜೆ 7 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮಿಗಳು, ಕಾದರವಳ್ಳಿ ಸೀಮೀಮಠದ ಡಾ ಪಾಲಾಕ್ಷ ಶಿವಯೋಗಿಶ್ವರ, ಹಾಗೂ ಬೆ„ಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಂ ರಾಮಚಂದ್ರಗೌಡ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಮತ್ತು ರಾಣಿ ಚನ್ನಮ್ಮನ ವಿಜಯೋತ್ಸವದ ರೂವಾರಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ