Breaking News
Home / ರಾಜಕೀಯ / ಭಾರತ್ ಬಂದ್’ ಮೊದಲೇ ಕೇಂದ್ರ ಸರ್ಕಾರಕ್ಕೆ ರೈತರು ನೀಡಿದ ಎಚ್ಚರಿಕೆ!?

ಭಾರತ್ ಬಂದ್’ ಮೊದಲೇ ಕೇಂದ್ರ ಸರ್ಕಾರಕ್ಕೆ ರೈತರು ನೀಡಿದ ಎಚ್ಚರಿಕೆ!?

Spread the love

ನವದೆಹಲಿ, ಸಪ್ಟೆಂಬರ್ 27: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಆರಂಭಿಸಿ 10 ತಿಂಗಳೇ ಕಳೆದು ಹೋಗಿವೆ. ಮುಂದಿನ 10 ವರ್ಷಗಳವರೆಗೂ ರೈತರು ತಮ್ಮ ಹೋರಾಟ ಮುಂದುವರಿಸುವುದಕ್ಕೆ ಸಿದ್ಧರಿದ್ದೇವೆಯೇ ಹೊರತೂ ಕೇಂದ್ರ ಸರ್ಕಾರದ ಕಪ್ಪು ಕಾಯ್ದೆಗಳ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಿಂದಲೂ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಾಣಿಪತ್ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, “ರೈತರ ಈ ಹೋರಾಟಕ್ಕೆ 10 ತಿಂಗಳು ಕಳೆದಿವೆ. ಕೇಂದ್ರ ಸರ್ಕಾರವು ಕಿವಿಗೊಟ್ಟು ರೈತರ ಬೇಡಿಕೆಗಳನ್ನು ಆಲಿಸಬೇಕು, ಇಲ್ಲದಿದ್ದರೆ ಈ ಹೋರಾಟವನ್ನು ಮುಂದಿನ 10 ವರ್ಷಗಳವರೆಗೂ ಮುಂದುವರಿಸುವುದಕ್ಕೆ ನಾವು ಸಿದ್ಧರಾಗಿದ್ದೇವೆ,” ಎಂದು ಹೇಳಿದರು.

ಹೋರಾಟ ತೀವ್ರಗೊಳಿಸುವ ಎಚ್ಚರಿಕೆ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. ರೈತರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. “ರೈತರೇ ನಿಮ್ಮ ಟ್ರ್ಯಾಕ್ಟರ್ ಅನ್ನು ಸದಾ ಸಜ್ಜುಗೊಳಿಸಿ ಇಟ್ಟುಕೊಂಡಿರಿ, ಅವುಗಳನ್ನು ಯಾವುದೇ ಸಮಯದಲ್ಲಿ ದೆಹಲಿಗೆ ತೆಗೆದುಕೊಳ್ಳ ಬರಬೇಕಾಗಬಹುದು,” ಎಂದು ರೈತರಿಗೆ ಕರೆ ನೀಡಿದ್ದಾರೆ.

ಸೋಮವಾರ ಕೃಷಿ ಕಾಯ್ದೆ ವಿರುದ್ಧ ಭಾರತ್ ಬಂದ್

 

ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟಕ್ಕೆ 10 ತಿಂಗಳು ಪೂರೈಸಿದ ಹಿನ್ನೆಲೆ ಸೆಪ್ಟೆಂಬರ್ 27ರ ಸೋಮವಾರ ಭಾರತ್ ಬಂದ್ ನಡೆಸುವುದಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ಈ ಮಧ್ಯೆ ನಡೆದ ಮಹಾಪಂಚಾಯತ್ ಅನ್ನು ಉದ್ದೇಶಿಸಿ ಮಾತನಾಡಿರುವ ರಾಕೇಶ್ ಟಿಕಾಯತ್, ಪ್ರಸ್ತುತ ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದಿದ್ದರೆ ಮುಂಬರುವ ಸರ್ಕಾರವು ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. “ಈ ದೇಶದಲ್ಲಿ ಯಾವ ಸರ್ಕಾರ ಆಡಳಿತ ನಡೆಸುತ್ತದೆಯೋ ಆ ಸರ್ಕಾರವು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ನಾವು ಈ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಬಿಡುವುದಿಲ್ಲ, ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ದೇಶದ ರೈತರನ್ನು ಅರ್ಥ ಮಾಡಿಕೊಂಡಿಲ್ಲ

 

“ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರವು ರೈತರ ಮನೋಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ರೈತರ ಹೋರಾಟ ಮತ್ತು ಅವುಗಳ ಹಿಂದಿನ ಉದ್ದೇಶ ಅರ್ಥ ಮಾಡಿಕೊಂಡಿದ್ದರೆ, ಕೇಂದ್ರವು ಇಂಥ ಕಪ್ಪು ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ಮನಸ್ಸು ಮಾಡುತ್ತಿರಲಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ ಕಳೆದ 10 ತಿಂಗಳಿನಿಂದ ತಮ್ಮ ತಮ್ಮ ಮನೆಗಳಿಗೆ ತೆರಳದೇ ರೈತರು ಹೋರಾಟ ನಡೆಸುತ್ತಿದ್ದಾರೆ ಎಂದರೆ ಮುಂದಿನ 10 ವರ್ಷಗಳವರೆಗೂ ತಮ್ಮ ಪ್ರತಿಭಟನೆ ಮುಂದುವರಿಸುವುದಕ್ಕೆ ಅವರೆಲ್ಲ ಬದ್ಧರಾಗಿದ್ದಾರೆ ಎಂದು ನೀವು ಅರ್ಥ ಮಾಡಿಕೊಳ್ಳಬೇಕಿದೆ,” ಎಂದು ಬಿಕೆಯು ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಬಲಪಡಿಸಲು ಸಾಮಾಜಿಕ ಮಾಧ್ಯಮವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಟಿಕಾಯತ್ ಯುವ ರೈತರನ್ನು ಒತ್ತಾಯಿಸಿದ್ದಾರೆ. ರೈತರ ಹೋರಾಟದ ಬಗ್ಗೆ ಅಪಪ್ರಚಾರ ಮಾಡುವ ಹಾಗೂ ಕೆಟ್ಟದಾಗಿ ಬಿಂಬಿಸಲು ಹೊರಟಿರುವ ಸಮಯವನ್ನು ಸಮರ್ಥವಾಗಿ ಎದುರಿಸುವಲ್ಲಿ ಯುವ ರೈತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಟಿಕಾಯತ್ ಹೇಳಿದ್ದಾರೆ.

ವಿವಾದಿತ ಕೃಷಿ ಕಾಯ್ದೆ ಮತ್ತು ರೈತರ ಹೋರಾಟ

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ