Breaking News
Home / ಜಿಲ್ಲೆ / ಬೆಂಗಳೂರು / ಅಕ್ರಮ ಬಡಾವಣೆ: ಸಚಿವರ ಭಿನ್ನ ನಿಲುವು

ಅಕ್ರಮ ಬಡಾವಣೆ: ಸಚಿವರ ಭಿನ್ನ ನಿಲುವು

Spread the love

ಬೆಂಗಳೂರು: ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಅಕ್ರಮ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರೆ, ನಗರ ಸ್ಥಳೀಯ ಸಂಸ್ಥೆಗಳ ಅಕ್ರಮ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸಲಾಗುತ್ತದೆ ಎಂದು ಎಂಟಿಬಿ ನಾಗರಾಜ್‌ ಹೇಳಿದರು.

ಇಬ್ಬರು ಸಚಿವರ ಹೇಳಿಕೆಗಳು ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ‘ಈ ಎರಡು ಇಲಾಖೆಗಳು ಸರ್ಕಾರದ ಒಳಗೆ ಇವೆಯೋ ಇಲ್ಲವೇ. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ’ ಎಂದು ಸದಸ್ಯರು ಪ್ರಶ್ನಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಅಮೃತ್‌ ದೇಸಾಯಿ ಪ್ರಶ್ನೆಗೆ ಉತ್ತರಿಸಿದ ಬೈರತಿ ಬಸವರಾಜ, ‘ಅಕ್ರಮ ಬಡಾವಣೆಗಳಿಗೆ ವಿದ್ಯುತ್‌ ಸಂಪರ್ಕ, ನೀರು ಸರಬರಾಜು ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸಬಾರದು ಎಂದು ಸೂಚಿಸಲಾಗಿದೆ’ ಎಂದರು.

ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ‘ರಾಜ್ಯದಾದ್ಯಂತ ಸಾವಿರಾರು ಅಕ್ರಮ ಬಡಾವಣೆಗಳು ನಿರ್ಮಾಣವಾಗಿವೆ. ಅವುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಸಚಿವರ ಇಂತಹ ಉತ್ತರ ಕೇಳಲು ನಾವು ಇಲ್ಲಿಗೆ ಬರಬೇಕಾ’ ಎಂದು ಪ್ರಶ್ನಿಸಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಸ್ಥಳೀಯ ಅಧಿಕಾರಿಗಳು ಸರ್ಕಾರದ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಅವರು ಸ್ಥಳೀಯರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು. ಕಾಂಗ್ರೆಸ್‌ನ ಶಿವಾನಂದ ಪಾಟೀಲ, ‘ಬಡಾವಣೆ ನಿರ್ಮಿಸುವವರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ’ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ‘ಈ ಬಡಾವಣೆಗಳಿಗೆ ಮೂಲಸೌಕರ್ಯ ನೀಡಲಾಗುತ್ತದೆ. ಆದರೆ, ಫಾರಂ 3 ನೀಡುವುದಿಲ್ಲ. ಅಕ್ರಮ-ಸಕ್ರಮ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದರಿಂದ ಸದ್ಯ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ’ ಎಂದರು.

‘ಅಕ್ರಮ ಬಡಾವಣೆಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಸದಸ್ಯರಾದ ಕುಮಾರ ಬಂಗಾರಪ್ಪ, ಶಿವಾನಂದ ಪಾಟೀಲ ಮತ್ತಿತರರು ಗಮನ ಸೆಳೆದರು. ಅಧಿಕಾರಿಗಳ ಧೋರಣೆಯಿಂದಾಗಿ ಜನರು ಮನೆ ನಿರ್ಮಾಣದ ವೇಳೆ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳ ಪ್ರವೃತ್ತಿಗೆ ಕಡಿವಾಣ ಹಾಕಬೇಕು’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

*

ಅಕ್ರಮ ಬಡಾವಣೆಗಳ ಬಗ್ಗೆ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಪರಿಶೀಲಿಸಲಾಗುವುದು.
-ಬೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

*

ಒಂದೊಂದು ಇಲಾಖೆ ಒಂದೊಂದು ರೀತಿ ತೀರ್ಮಾನ ಕೈಗೊಳ್ಳುತ್ತಿವೆ. ಇಲ್ಲಿ ಏನು ನಡೆಯುತ್ತಿದೆ. ಒಂದೇ ಸರ್ಕಾರದ ಎರಡು ಇಲಾಖೆಗಳು ಈ ರೀತಿ ತೀರ್ಮಾನ ಕೈಗೊಳ್ಳಲು ಸಾಧ್ಯವೇ.
-ಎ.ಟಿ.ರಾಮಸ್ವಾಮಿ, ಜೆಡಿಎಸ್‌ ಸದಸ್ಯ

*

ನಿಮ್ಮ ಅಧಿಕಾರಿಗಳಿಗೆ ಸ್ವಲ್ಪ ಬುದ್ಧಿ ಹೇಳಿ. ಅವರ ಬೇಜವಾಬ್ದಾರಿತನದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅವರಿಗೆ ಸ್ವಲ್ಪವೂ ಜವಾಬ್ದಾರಿ ಬೇಡವೇ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

*

ರಾಜ್ಯದಲ್ಲಿ ಅಕ್ರಮ ಬಡಾವಣೆಗಳು ತಲೆ ಎತ್ತಲು ಕಂದಾಯ ಇಲಾಖೆಯ ಅಧಿಕಾರಿಗಳೇ ಕಾರಣ.
-ಕುಮಾರ ಬಂಗಾರಪ್ಪ, ಬಿಜೆಪಿ ಸದಸ್ಯ

*

ಗ್ರಾ.ಪಂ ವ್ಯಾಪ್ತಿಯೊಳಗೆ ಇದ್ದಾಗ ಅಕ್ರಮ ಬಡಾವಣೆಗಳು ನಿರ್ಮಾಣವಾಗಿದ್ದವು. ಗ್ರಾ.ಪಂ.ಗಳು ಮೇಲ್ದರ್ಜೆಗೆ ಏರಿದ್ದರಿಂದ ಇವುಗಳು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬಂದಿವೆ. ಈಗ ಇವುಗಳ ಸಂಖ್ಯೆ ಕಡಿಮೆಯಾಗಿದೆ.
-ಎಂಟಿಬಿ ನಾಗರಾಜ್‌,ಪೌರಾಡಳಿತ ಸಚಿವ


Spread the love

About Laxminews 24x7

Check Also

ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಗೆ ಜಗದೀಶ್​​ ಶೆಟ್ಟರ್‌ ಕೊಡುಗೆ ಏನು? ಲಕ್ಷ್ಮೀ ಹೆಬ್ಬಾಳ್ಕರ್

Spread the love  ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ