Home / ರಾಜಕೀಯ / ವಿಶ್ಲೇಷಣೆ: ಸದನದ ಕಲಾಪ ಮತ್ತು ಹಳೆಯ ವರಸೆ

ವಿಶ್ಲೇಷಣೆ: ಸದನದ ಕಲಾಪ ಮತ್ತು ಹಳೆಯ ವರಸೆ

Spread the love

ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶ ಹೊತ್ತು ಕಾಂಗ್ರೆಸ್ ಪಕ್ಷದ ನಾಯಕರು ಇತ್ತೀಚೆಗೆ ವಿಧಾನಸೌಧ ತಲುಪಲು ಚಕ್ಕಡಿ ಏರಿದರು, ಸೈಕಲ್ ತುಳಿದರು. ಬೆಲೆ ಏರಿಕೆ ಸಂಕಟವನ್ನು ಸರ್ಕಾರಕ್ಕೆ ತಲುಪಿಸುವುದರ ಜೊತೆಗೆ ತಮ್ಮ ಜನಪರ ಕಾಳಜಿಯನ್ನು ಮತದಾರರಿಗೆ ಮುಟ್ಟಿಸುವ ಆಶಯ ಅವರ ಕಾರ್ಯಕ್ರಮದಲ್ಲಿ ಅಡಕವಾಗಿದ್ದು ರಹಸ್ಯವೇನಲ್ಲ.

ಆದರೆ, ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧೆಗಿಳಿದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಈ ಪ್ರಯತ್ನಗಳು ಒಂದು ರೀತಿಯಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷಗಳಿಗೆ ಮರೆತೇಹೋಗಿದ್ದ ಪ್ರತಿಭಟನೆಯ ರಿಹರ್ಸಲ್‌ನಂತೆ ಕಾಣಿಸಿದವು. ಹಾಗಾಗಿ ಜನಸಾಮಾನ್ಯರನ್ನು ತೀವ್ರ ಸಂಕಟಕ್ಕೀಡು ಮಾಡಿರುವ ಬೆಲೆ ಏರಿಕೆಯಂತಹ ಗಹನ ವಿಷಯ ಕೂಡ ಮಹತ್ವ ಕಳೆದುಕೊಂಡು ಪ್ರಹಸನದ ರೂಪ ಪಡೆಯುವಂತಾಯಿತು. ಈ ನಾಯಕರ ಪ್ರತಿಭಟನೆಯ ದೃಶ್ಯಗಳು ಜನರಲ್ಲಿ ನಗೆ ಉಕ್ಕಿಸಿದರೆ ಆಡಳಿತ ಪಕ್ಷದವರಿಗೆ ಮನಸೋಇಚ್ಛೆ ಗೇಲಿ ಮಾಡಲು ಅವಕಾಶ ಕಲ್ಪಿಸಿದವು.

 

ಬಹುಪಾಲು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಏದುಸಿರು ಬಿಡುತ್ತಿರುವ ಜನಸಾಮಾನ್ಯರ ಬದುಕಿನ ಬವಣೆಯನ್ನು ಆಡಳಿತಪಕ್ಷ, ವಿರೋಧಪಕ್ಷ ಎಂಬ ಭೇದವಿಲ್ಲದೇ ಜನಪ್ರತಿನಿಧಿಗಳು ಸದನದಲ್ಲಿ ಸಮರ್ಥವಾಗಿ ಬಿಂಬಿಸಬೇಕಿತ್ತು. ಅದಾಗದೆ ಸದನದಲ್ಲಿ ವ್ಯರ್ಥ, ಮನರಂಜನಾ ಸ್ವರೂಪದ ಮಾತುಗಾರಿಕೆಯ ಪೈಪೋಟಿಯೇ ನಡೆಯಿತು. ಉತ್ತರ ನೀಡಿದ ಮುಖ್ಯಮಂತ್ರಿ ಕೂಡ ತಮ್ಮ ಮಾತುಗಳಿಗೆ ಚಮತ್ಕಾರಿಕ ಪದಪುಂಜಗಳ ತೋರಣ ಪೋಣಿಸಿದರೇ ಹೊರತು ಅವರ ಮಾತುಗಳಲ್ಲಿ ಸಮಸ್ಯೆಯ ಗಾಂಭೀರ್ಯ, ಕಾಳಜಿಯ ಕುರುಹು ಕಾಣಿಸಲೇ ಇಲ್ಲ.

 

ಕೊನೆಗೂ ಬೆಲೆಯೇರಿಕೆ ಸಮಸ್ಯೆಯ ಇರುವಿಕೆಯನ್ನಾದರೂ ಸರ್ಕಾರ ಒಪ್ಪಿತೇ, ಅದರ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ಪ್ರಕಟಿಸಿತೇ, ಈ ದಿಸೆಯಲ್ಲಿ ವಿರೋಧಪಕ್ಷದ ಸದಸ್ಯರು ರಚನಾತ್ಮಕ ಸಲಹೆಗಳನ್ನೇನಾದರೂ ನೀಡಿದರೇ ಎಂಬ ಪ್ರಶ್ನೆಗಳು ಹಾಗೇ ಉಳಿದವು.

ಇತ್ತೀಚೆಗೆ ವಿರೋಧ ಪಕ್ಷಗಳ ಪ್ರತಿಯೊಂದು ಆರೋಪ, ಆಕ್ಷೇಪಕ್ಕೆ, ಆಡಳಿದಲ್ಲಿರುವವರು ‘ನೀವೇನು ಕಮ್ಮಿ, ನಿಮ್ಮ ಆಡಳಿತದಲ್ಲಿ ಹಾಗಿತ್ತು.’ ಎಂದು ಮರುದೂಷಣೆ ಮಾಡುವುದು ಪರಿಪಾಟವಾಗಿದೆ. ಸಮಸ್ಯೆಯ ಹೊಣೆಯನ್ನು ಪರಸ್ಪರರ ಹೆಗಲಿಗೆ ಹೊತ್ತುಹಾಕಿ ಪರಿಹಾರ ಹುಡುಕುವ ಪ್ರಯತ್ನದಿಂದ ನುಣುಚಿಕೊಳ್ಳುವ ಜಾಣತನವಿದು. ಪ್ರಶ್ನಿಸುವವರ ನೈತಿಕತೆಯನ್ನೇ ಅನುಮಾನಿಸಿ ಸುಮ್ಮನಾಗಿಸುವುದು ಪ್ರಚಲಿತ ತಂತ್ರಗಾರಿಕೆ. ಅದಕ್ಕೆ ತಕ್ಕಂತೆಯೇ ಯಾರ ಆಡಳಿತಾವಧಿಯಲ್ಲಿ ಎಷ್ಟೆಷ್ಟು ಬೆಲೆ ಏರಿಕೆ ಆಗಿತ್ತು ಎಂಬ ಅಂಶ ಸದನದ ಚರ್ಚೆಯ ಮುಖ್ಯ ವೇದಿಕೆಗೆ ಬಂದಿತೇ ಹೊರತು ಸಮಸ್ಯೆಯ ಮೂಲದ ಪರಿಶೀಲನೆ, ಪರಿಹಾರದ ಉಪಾಯಗಳು ಯಾವ ಸದಸ್ಯರ ಮಿದುಳಿಗೂ ಹೊಳೆಯಲಿಲ್ಲ, ಯಾರ ನಾಲಗೆಗೂ ನಿಲುಕಲಿಲ್ಲ!

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಬೆಲೆ ಏರಿಕೆ ಮೂಲಕ ಆಗಿನ ಸರ್ಕಾರ ಲೂಟಿ ಹೊಡೆದಿದೆ ಎಂದು ಆರೋಪಿಸಿದ್ದನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು ‘ಲೂಟಿ’ ಪದವನ್ನು ಸದನ ಚ್ಯೂಯಿಂಗ್‌ ಗಮ್‌ನಂತೆ ಜಗಿಯಲು ಅನುವು ಮಾಡಿಕೊಟ್ಟರು. ‘ನಿಮ್ಮ ಪಕ್ಷದ ಆಡಳಿತದಲ್ಲೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿತ್ತು; ನೀವೂ ಲೂಟಿ ಮಾಡಿದಿರಾ?’ ಎಂಬುದು ಮುಖ್ಯಮಂತ್ರಿಯವರ ಮರುಪ್ರಶ್ನೆ. ಅದಕ್ಕೆ ವಿರೋಧಪಕ್ಷಗಳ ತಗಾದೆ. ಹೀಗೆ ಮಾತಿನ ಎಳೆ ಹಿಡಿದುಕೊಂಡು ಎಳೆದಾಡುವುದರಿಂದ ಅಗತ್ಯ ವಸ್ತುಗಳ ಬೆಲೆ ಇಳಿಯುವುದಿಲ್ಲ, ಸದನದ ಸಮಯ ಮತ್ತು ಕರದಾತರ ಹಣ ಖರ್ಚಾಗುತ್ತದೆ, ಜನಪ್ರತಿನಿಧಿಗಳ ಗೌರವ ಇಳಿಕೆಯಾಗುತ್ತದೆ ಎಂಬ ಅರಿವು ಯಾರಿಗೂ ಇಲ್ಲ.

ವಾಚ್ಯಾರ್ಥದಲ್ಲಿ ಸದನವನ್ನು ಮಾತಿನ ಮನೆ ಎಂದು ಗುರುತಿಸುವುದು ನಿಜ. ಹಾಗೆಂದು ಪ್ರಜಾಪ್ರಭುತ್ವ ವ್ಯವಸ್ಥೆಯ ತಳಪಾಯವಾದ ಶಾಸನಸಭೆಯಲ್ಲಿ ಆಡುವ ಮಾತುಗಳ ಹಿಂದಿರಬೇಕಾದ ಅರ್ಥವಂತಿಕೆ, ಕಳಕಳಿ ಕಳೆದುಕೊಂಡು ಕೇವಲ ಬಾಯಿಮಾತುಗಳ ಭರಾಟೆಗೆ, ಗಲಾಟೆಗೆ, ವಾಕ್ಚಾತುರ್ಯದ ಪ್ರದರ್ಶನಕ್ಕೆ ವೇದಿಕೆಯಾದರೆ ಹೇಗೆ? ಸದನದ ಮಾತುಗಾರಿಕೆಯ ನೇತಾರ ಎನ್ನಿಸಿಕೊಳ್ಳುವ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರೇ ಹೇಳುವಂತೆ, ವಿಧಾನಸಭೆಯಲ್ಲಿ ಆಡಳಿತಪಕ್ಷ, ವಿರೋಧಪಕ್ಷಗಳ ಬದಲಾಗಿ ಮಾಜಿ ಆಡಳಿತಪಕ್ಷ, ಮಾಜಿ ವಿರೋಧಪಕ್ಷ ಹಾಗೂ ಭಾವಿ ಆಡಳಿತಪಕ್ಷ, ಭಾವಿ ವಿರೋಧಪಕ್ಷಗಳು ಕಾರ್ಯನಿರ್ವಹಿಸುತ್ತಿವೆ. ಸದನದಲ್ಲಿ ಕಲಾಪ ನಡೆಯುವ ಸಂದರ್ಭದಲ್ಲಿ, ವಿರೋಧಿ ಪಾಳಯದಲ್ಲಿರುವವರು ಒಂದು ಹಿಡಿಯಷ್ಟು ಹಾಲಿ ಆಡಳಿತಪಕ್ಷದವರಾಗಿ, ಆಡಳಿತದ ಚುಕ್ಕಾಣಿ ಹಿಡಿದವರು ಮುಷ್ಟಿಯಷ್ಟು ಹಾಲಿ ವಿರೋಧಪಕ್ಷದವರಾಗಿ ಯೋಚಿಸಲು ಸಾಧ್ಯವಾದರೆ ಅದರ ಪರಿಣಾಮವೇ ಬೇರೆಯಾದೀತು.

ಅದೇ ಸದನ, ಹೆಚ್ಚುಕಮ್ಮಿ ಅವರೇ ಸದಸ್ಯರು, ಅವೇ ಸಮಸ್ಯೆಗಳು, ಅವೇ ಮಾತುಗಳು, ಅವೇ ಬಾಯಿಗಳು. ಆದರೆ ಬದಿಗಳು ಮಾತ್ರ ಬೇರೆ ಬೇರೆ. ಅಲ್ಲಿದ್ದಾಗ ಆ ಮಾತು, ಇಲ್ಲಿದ್ದಾಗ ಈ ಮಾತು. ಅಷ್ಟೇ ವ್ಯತ್ಯಾಸ. ಯಾವುದೋ ಪದಬಳಕೆ, ಹೀಯಾಳಿಕೆ ನೆಪದಿಂದ ವಿರೋಧಪಕ್ಷ ಸಭಾತ್ಯಾಗ ಮಾಡುವುದು, ಆ ಸಮಯದಲ್ಲಿಯೇ ಸರ್ಕಾರ ಚರ್ಚೆಯಿಲ್ಲದೆ ತನ್ನಿಷ್ಟದ ಮಸೂದೆಗಳನ್ನು ಮಂಡಿಸಿ ಒಪ್ಪಿಗೆ ಪಡೆಯುವುದು ಏನನ್ನು ತೋರಿಸುತ್ತದೆ? ಇದೊಂಥರಾ ಅಲಿಖಿತ ಒಡಂಬಡಿಕೆ ಎಂದೆನ್ನಿಸುವುದಿಲ್ಲವೇ? ಸದನದಲ್ಲಿ ಮನರಂಜನೆಯ ಮಾತುಗಾರಿಕೆಯೇ ಮುಖ್ಯವಾಗಿ, ಅದೇ ಸದಸ್ಯರ ಅರ್ಹತೆಗೆ ಅಳತೆಗೋಲಾಗಿ ಪರಿಣಮಿಸಿದರೆ ಪ್ರಜಾಪ್ರಭುತ್ವ ಪರಂಪರೆಯಲ್ಲಿ ಬಳಕೆಯಲ್ಲಿರುವ ‘ಸಂಸದೀಯ ಪಟು’ ಪದದ ಅರ್ಥ ತಿರುಚಬೇಕಾದೀತು. ಸದನವು ಬರೀ ಆರೋಪ ಪ್ರತ್ಯಾರೋಪಗಳ ಪಡಸಾಲೆಯಾದರೆ, ದೂಷಣೆಗಳ, ಸಮರ್ಥನೆಗಳ ಕದನಕಣವಾದರೆ ‘ಸದನ ಕಲಿ’ಗಳ ಸಂತತಿ ಬೆಳೆಯಬಹುದಷ್ಟೇ; ಜನರ ಸಮಸ್ಯೆಗಳಿಗೆ ಪರಿಹಾರ ಸಿಗಲಾರದು.

ರಾಜ್ಯ ಸರ್ಕಾರದ ನಾಯಕತ್ವ ಬದಲಾಗಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗ ಸಹಜವಾಗಿಯೇ ಹೊಸ ಭರವಸೆ ಹುಟ್ಟಿಕೊಂಡಿತ್ತು. ಅವರು ಆಡಳಿತದ ಹಳೆಯ ಶೈಲಿಯ ನಡೆನುಡಿ ದಾಟಿ ಸಾಗುವರೆಂದು ಭಾವಿಸಲಾಗಿತ್ತು. ಆದರೆ ಸದನದಲ್ಲಿ ಅವರ ಮಾತಿನ ಧಾಟಿ, ವರಸೆ ಹೆಚ್ಚೇನೂ ಆಶಾದಾಯಕವಾಗಿ ಕಾಣಿಸುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆಯೇರಿಕೆ ಕುರಿತು ನಿಯಮ 69ರ ಅಡಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮೊದಲ ಬಾರಿಗೆ ಸರ್ಕಾರದ ಮುಖ್ಯಸ್ಥರಾಗಿ ಉತ್ತರಿಸುವಾಗ ಬೊಮ್ಮಾಯಿಯವರು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯ ಬೆಲೆಯೇರಿಕೆಯ ಅಂಕಿಅಂಶ ಬಿಚ್ಚಿಟ್ಟಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಮಾತ್ರ ಬೆಲೆ ಏರಿಕೆಯಾಗಿಲ್ಲ ಎಂಬುದು ಈ ಮಾಜಿ ವಿರೋಧ ಪಕ್ಷದ ಸದಸ್ಯರ ಮಾತಿನ ತಿರುಳು!

ಸ್ವತಃ ರೈತಪರ ಹೋರಾಟ ಮಾಡಿದ್ದ ಬೊಮ್ಮಾಯಿಯವರು ನವದೆಹಲಿ ಬಳಿಯ ರೈತರ ಹೋರಾಟವನ್ನು ‘ಪ್ರಾಯೋಜಿತ’ ಎಂದು ಅವಹೇಳನ ಮಾಡಿದ್ದು ಯಾರನ್ನೋ ಮೆಚ್ಚಿಸುವ ಯತ್ನವೆಂಬುದು ಸ್ಪಷ್ಟ. ಸುಪ್ರೀಂ ಕೋರ್ಟ್ ತೀರ್ಪಿನ ಆಶಯಕ್ಕೆ ವಿರುದ್ಧವಾಗಿ ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಮಸೂದೆಗೆ ಮಾಜಿ ಆಡಳಿತಪಕ್ಷ ದನಿಗೂಡಿಸಿದೆ. ಮತಾಂತರ ನಿಷೇಧ ಕಾಯ್ದೆ ರೂಪಿಸಲು ಕೂಡಾ ಸರ್ಕಾರ ಚಿಂತನೆ ನಡೆಸಿದೆಯಂತೆ.

ರಾಯಿಸ್ಟ್ ಎಸ್.ಆರ್.ಬೊಮ್ಮಾಯಿ ಅವರ ಮಗನಾಗಿ, ಜನತಾಪರಿವಾರದ ಸಮಾಜವಾದಿ ಹಿನ್ನೆಲೆಯ ರಾಜಕಾರಣಿಯಾಗಿ ಗುರುತಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ತಮ್ಮ ಸೈದ್ಧಾಂತಿಕ ಸ್ಥಿತ್ಯಂತರ ನಿಭಾಯಿಸುವ ಸವಾಲು ಮತ್ತು ಸಂದಿಗ್ಧ ಎದುರಿಸುತ್ತಿರುವಂತೆ ಕಾಣಿಸುತ್ತದೆ. ಹಾಗಾಗಿ ಯಾವ ವೇದಿಕೆಯಲ್ಲಿಯೂ ಪಕ್ಷದ ಬಲಪಂಥೀಯ ಧೋರಣೆಗಳನ್ನು ಗಟ್ಟಿದನಿಯಲ್ಲಿ ಪ್ರತಿಪಾದಿಸುವ ಅವಕಾಶ ಕಳೆದುಕೊಳ್ಳುತ್ತಿಲ್ಲ. ಅವರ ಇಂತಹ ವರ್ತನೆಗಳು ಹೊಸದಾಗಿ ಮತಾಂತರ ಗೊಂಡವರ ಅತಿರೇಕದ ಧರ್ಮನಿಷ್ಠೆಯಂತೆ ಕಂಡರೆ ಅಚ್ಚರಿಯಿಲ್ಲ!


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ