Breaking News
Home / ರಾಜಕೀಯ / ಎತ್ತಿನಬಂಡಿ ಓಟ ಸ್ಪರ್ಧೆ: ಷರತ್ತುಗಳೊಂದಿಗೆ ಹೈಕೋರ್ಟ್ ಹಸಿರು ನಿಶಾನೆ

ಎತ್ತಿನಬಂಡಿ ಓಟ ಸ್ಪರ್ಧೆ: ಷರತ್ತುಗಳೊಂದಿಗೆ ಹೈಕೋರ್ಟ್ ಹಸಿರು ನಿಶಾನೆ

Spread the love

ಬೆಂಗಳೂರು: ಸುಪ್ರೀಂ ಕೋರ್ಟ್‌ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ರಾಜ್ಯದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆ ಮಾಡಲು ಹೈಕೋರ್ಟ್‌ ಬುಧವಾರ ಹಸಿರು ನಿಶಾನೆ ತೋರಿದೆ.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸುವುದನ್ನು ಪ್ರಶ್ನಿಸಿ ಮೈಸೂರಿನ ಪೀಪಲ್‌ ಫಾರ್‌ ಅನಿಮಲ್ಸ್‌. ವೆಲ್ಫೇರ್‌ ಆರ್ಗನೈಸೇಷನ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಆದೇಶದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜನೆಗೆ ಸುಪ್ರೀಂ ಕೋರ್ಟ್‌ ರೂಪಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ‘ಕರ್ನಾಟಕ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-2017’ರ ಸೆಕ್ಷನ್‌ 2(28)ಕ್ಕೆ ತಿದ್ದುಪಡಿ ತರಲಾಗಿದೆ. ಆ ತಿದ್ದುಪಡಿ ಪ್ರಕಾರ ರಾಜ್ಯದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ನಡೆಸಲು ಅವಕಾಶವಿದೆ ಮತ್ತು ಅದು ಅಪರಾಧವಲ್ಲ. ಸ್ಪರ್ಧೆ ವೇಳೆ ಭಾಗವಹಿಸುವ ಎತ್ತುಗಳಿಗೆ ಹಿಂಸೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ತಿಳಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಈ ಅರ್ಜಿಯಲ್ಲಿ ಎತ್ತಿನ ಬಂಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಿರುವ ನಿಯಮವನ್ನು ಪ್ರಶ್ನಿಸಿಲ್ಲ. ಹೀಗಾಗಿ, ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಮಹಾರಾಷ್ಟ್ರದಲ್ಲಿನ ಎತ್ತಿನ ಬಂಡಿ ಸ್ಪರ್ಧೆ ಮತ್ತು ತಮಿಳುನಾಡಿನ ಜಲ್ಲಿಕಟ್ಟು ಆಯೋಜನೆ ಪ್ರಕರಣಗಳಲ್ಲಿ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರಾಣಿಗಳಿಗೆ ಯಾವುದೇ ಹಿಂಸೆ ಆಗುವುದನ್ನು ತಡೆಯಲು ಕೆಲ ಷರತ್ತು ವಿಧಿಸಿ ಸುಪ್ರೀಂ ಕೋರ್ಟ್‌ 2013ರ ಅ.10ರಂದು ಆದೇಶಿಸಿದೆ. ಆ ಷರತ್ತುಗಳನ್ನು ಎತ್ತಿನ ಬಂಡಿ ಸ್ಪರ್ಧೆ ಆಯೋಜನೆ ವೇಳೆ ಕರ್ನಾಟಕದಲ್ಲೂ ಜಾರಿ ಮಾಡಬಹುದು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ