ಬೆಳಗಾವಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದ್ರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿಗೆ ನಮ್ಮನ್ನು ಪರಿಗಣಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಅದರಂತೆ ಹೈಕಮಾಂಡ್ ನಮಗೆ ಒಳ್ಳೆಯ ಜವಾಬ್ದಾರಿ ವಹಿಸಿದೆ. ಈ ಹಿನ್ನಲೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರ ದಾರಿಯಲ್ಲಿ ನಾವು ಸಾಗುತ್ತೇವೆ. ಜತೆಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಪಕ್ಷಕ್ಕೆ ಏನಾದರು ಮಾಡಬೇಕು ಎಂಬ ಆಶಯವಿದೆ. ನೂತನ ಅಧ್ಯಕ್ಷರು ಉತ್ಸಾಹಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಸೇರಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಚುನಾವಣೆ ಬರಲು ಇನ್ನು ಮೂರು ವರ್ಷಗಳ ಸಮಯಾವಕಾಶವಿದೆ. ಅಧ್ಯಕ್ಷರಿಗೆ ಇದೊಂದು ಒಳ್ಳೆಯ ಅವಕಾಶವಿದ್ದು, ಕಾರ್ಯಾಧ್ಯಕ್ಷರಾದ ನಾವು ಕೂಡ ಅವರಿಗೆ ಸಂಪೂರ್ಣ ಸಹಕಾರ ನೀಡಿ ಮೂರು ವರ್ಷದ ಬಳಿಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದಲಿತ ಸಮುದಾಯದ ನಾಯಕರೊಬ್ಬರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಬೇಕು ಎಂಬ ಬೇಡಿಕೆ ಇದೆ. ಇನ್ನು ಒಂದು ಹುದ್ದೆ ಖಾಲಿ ಇದ್ದು, ದಲಿತ ನಾಯಕರಿಗೆ ಕಾರ್ಯಾಧ್ಯಕ್ಷ ನೀಡವಂತೆ ನಮ್ಮದು ಒತ್ತಡವಿದೆ ಎಂದು ಹೇಳಿದ್ರು.