Breaking News

ಕರ್ನಾಟಕ ಯೋಗದ ಕೇಂದ್ರ ಬಿಂದು – ವರನಟ ಡಾ.ರಾಜ್‌ ಸ್ಮರಿಸಿದ ಪ್ರಧಾನಿ ಮೋದಿ

Spread the love

ಬೆಂಗಳೂರು: ಕರ್ನಾಟಕದ ಈ ಪುಣ್ಯ ಭೂಮಿಯು ಶತಮಾನಗಳಿಂದಲೂ ಯೋಗದ ಕೇಂದ್ರಬಿಂದುವಾಗಿದೆ. ಅನೇಕ ಆಚಾರ್ಯರು, ವಿದ್ವಾಂಸರು ಜನ್ಮ ತಳೆದು, ಯೋಗ ಪರಂಪರೆಯನ್ನ ಸಮೃದ್ಧಿಗೊಳಿಸಿದ್ದಾರೆ. ಕನ್ನಡದ ಅದ್ಭುತ ಕಲಾವಿದರಾದ ಡಾ. ರಾಜ್‌ಕುಮಾರ್‌ ಅವರು ಕಲಾ ಜಗತ್ತಿನೊಂದಿಗೆ ಯೋಗ ಕ್ಷೇತ್ರಕ್ಕೂ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದ ವರನಟ ದಿವಂಗತ ಡಾ. ರಾಜ್‌ಕುಮಾರ್‌ ಅವರನ್ನ ಸ್ಮರಿಸಿದರು.

ಪ್ರಶಾಂತಿ ಕುಟೀರಂನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾಗಿರುವುದು ಅತ್ಯಂತ ಖುಷಿ ತಂದಿದೆ. ಆಧುನಿಕ ವಿಜ್ಞಾನವನ್ನ ಭಾರತದ ಆಧ್ಯಾತ್ಮಿಕ ಜ್ಞಾನದೊಂದಿಗೆ ಬೆಸೆಯುವ ಈ ಸಂಸ್ಥೆಯ ನಿರಂತರ ಪ್ರಯತ್ನಗಳು ನಿಜಕ್ಕೂ ಶ್ಲಾಘನೀಯ. ಕರ್ನಾಟಕದ ಈ ಪುಣ್ಯಭೂಮಿಯು ಶತಮಾನಗಳಿಂದಲೂ ಯೋಗದ ಪ್ರಮುಖ ಕೇಂದ್ರವಾಗಿದೆ. ಯೋಗದ ಈ ಅದ್ಭುತವಾದ ಶಕ್ತಿ, ಚೈತನ್ಯವನ್ನ ಅನುಭವಿಸುವ ಅವಕಾಶ ದೊರೆಯುತ್ತಿದೆ ಎಂದು ತಿಳಿಸಿದರು.

ಅನೇಕ ಆಚಾರ್ಯರು, ವಿದ್ವಾಂಸರು ಜನ್ಮ ತಳೆದು, ಯೋಗ ಪರಂಪರೆಯನ್ನ ಸಮೃದ್ಧಿಗೊಳಿಸಿದ್ದಾರೆ. ನಮ್ಮೆಲ್ಲರಿಗೂ ಗೊತ್ತಿದೆ, ಕನ್ನಡದ ಅದ್ಭುತ ಕಲಾವಿದರಾದ ಡಾ. ರಾಜ್‌ಕುಮಾರ್‌ ಅವರು, ಕಲಾ ಜಗತ್ತಿನೊಂದಿಗೆ ಯೋಗಕ್ಕೂ ಸೇವೆ ಸಲ್ಲಿಸಿದ್ದಾರೆ. ಇಂತಹ ಕರ್ನಾಟಕದ ಮಹಾನ್ ಪರಂಪರೆಯ ನಡುವೆ, ಪ್ರಶಾಂತಿ ಕುಟೀರದ 50 ವರ್ಷಗಳ ಪಯಣವು ಸೇವೆ ಮತ್ತು ಸಮರ್ಪಣೆಯ ಒಂದು ಅಸಾಧಾರಣ ಗಾಥೆಯಾಗಿ ನಿಂತಿದೆ. ಇದು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಲೇಬೇಕಾದ ಕಥೆಯಾಗಿದೆ. ಒಂದು ಸಣ್ಣ ಯೋಗ ಕೇಂದ್ರವು ಇಷ್ಟು ದೊಡ್ಡ ಆಂದೋಲನವಾಗಿ ವಿಕಸನಗೊಂಡಿರುವುದೇ ಒಂದು ಸ್ಫೂರ್ತಿಯಾಗಿದೆ. ಇದು ನಮ್ಮೆಲ್ಲರಿಗೂ ಒಂದು ಪ್ರೇರಣೆ ಎಂದು ಸ್ಮರಿಸಿದರು.

ಇದೇ ವೇಳೆ ಹಿರಿಯ ಚಿಂತಕ ಹೆಚ್.ವಿ. ಶೇಷಾದ್ರಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಮೋದಿ ಅವರು ಅವರ ಜೀವನ ಮತ್ತು ಆದರ್ಶಗಳನ್ನೂ ಸ್ಮರಿಸಿದ್ದಾರೆ. ಹೆಚ್.ವಿ. ಶೇಷಾದ್ರಿ ಅವರು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಮಹತ್ಕಾರ್ಯಕ್ಕೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಒಂದು ರಾಷ್ಟ್ರವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಮರ್ಪಣಾ ಮನೋಭಾವ, ಸಾಮರ್ಥ್ಯ ಮತ್ತು ಶಿಸ್ತುಳ್ಳ ನಾಗರಿಕರ ಅಗತ್ಯವಿದೆ ಎಂಬುದನ್ನು ಅವರು ಚೆನ್ನಾಗಿ ಅರಿತಿದ್ದರು. ಅಂತಹ ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವುದಕ್ಕಾಗಿಯೇ ಅವರು ತಮ್ಮ ಜೀವನವನ್ನು ಸಮರ್ಪಿಸಿಕೊಂಡರು ಎಂದು ಹೇಳಿದರು.

ನನಗೆ ನಿರಂತರವಾಗಿ ಶೇಷಾದ್ರಿ ಅವರ ಸ್ನೇಹ, ಮಾರ್ಗದರ್ಶನ ಸಿಕ್ಕಿತು.‌ ʻನಾವು ಸಮಾಜಕ್ಕೆ ನಮ್ಮ ಎರಡೂ ಕೈಗಳಿಂದ (ಪೂರ್ಣ ಮನಸ್ಸಿನಿಂದ) ಏನನ್ನಾದ್ರೂ ಕೊಡುಗೆ ನೀಡಿದ್ರೆ, ಸಮಾಜವು ನಮಗೆ ಲಕ್ಷಾಂತರ ಕೈಗಳಿಂದ ಅದನ್ನ ಮರಳಿ ನೀಡುತ್ತದೆʼ ಎಂದು ಶೇಷಾದ್ರಿ ಅವರು ಹೇಳುತ್ತಿದ್ದರು. ಇದು ಪದೇ ಪದೇ ಸಫಲವಾಗುವುದನ್ನ ಸ್ವತಃ ನನ್ನ ಜೀವನದಲ್ಲಿ ಕಣ್ಣಾರೆ ಕಂಡಿದ್ದೇನೆ ಎಂದು ನೆನಪಿಸಿಕೊಂಡರು.

ಸ್ವಾಮಿ ವಿವೇಕಾನಂದರಂತಹ ಸಂತರ ಪ್ರೇರಣೆಯಿಂದಾಗಿ ‘ಪ್ರಶಾಂತಿ ಕುಟೀರಂ’ನಂತಹ ಸಂಸ್ಥೆಗಳು ಸ್ಥಾಪನೆಯಾದವು. ಇಲ್ಲಿ ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವ ಆಂದೋಲನವನ್ನ ಆರಂಭಿಸಿದ್ದು ಮಾತ್ರವಲ್ಲದೆ, ಹೊಸ ಸಂಶೋಧನೆಗಳನ್ನೂ ನಡೆಸಿ, ಅವುಗಳನ್ನು ಆಧುನಿಕ ವಿಜ್ಞಾನದ ಮಾನದಂಡಗಳಿಗೆ ಅನುಗುಣವಾಗಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಯಿತು. ಒತ್ತಡ ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಸವಾಲುಗಳನ್ನ ಎದುರಿಸಲು ಇಲ್ಲಿ ನಡೆಸಿದ ಸಂಶೋಧನೆಯು ಇಡೀ ಜಗತ್ತಿಗೆ ಸೇವೆ ಸಲ್ಲಿಸಿದೆ ಎಂದು ಶ್ಲಾಘಿಸಿದರು.


Spread the love

About Laxminews 24x7

Check Also

ಪ್ರಧಾನಿ ಆಗಮನದ ಬೆನ್ನಲ್ಲೇ ಘೋಷಣೆ ವಾರ್‌ – ಬಿಜೆಪಿಗರಿಂದ ಮೋದಿ ಮೋದಿ, ಕಾಂಗ್ರೆಸ್ಸಿಗರಿಂದ ಡಿಕೆ ಡಿಕೆ ಘೋಷಣೆ!

Spread the loveಬೆಂಗಳೂರು: ನಗರಕ್ಕೆ ಪ್ರಧಾನಿ ಮೋದಿಯವರು ಆಗಮಿಸಿದ ಬೆನ್ನಲ್ಲೇ ಕಾಂಗ್ರೆಸ್‌  ಹಾಗೂ ಬಿಜೆಪಿ  ಕಾರ್ಯಕರ್ತರ ನಡುವೆ ಘೋಷಣೆಯ ವಾರ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ