Breaking News

ಮೀನು ತಿನ್ನಲು ಬಂದಿದ್ದ ಅಮಾಯಕನ ಮೇಲೆ ಲಾಂಗು-ಮಚ್ಚು ದಾಳಿ; ಯುವಕ ಸಾವು ಬದುಕಿನ ನಡುವೆ ಹೋರಾಟ

Spread the love

ಆನೇಕಲ್: ರೌಡಿಸಂ ಅನ್ನೋದು ಇವತ್ತು ನಿನ್ನೆಯ ಪಿಡುಗಲ್ಲ, ಆದರೆ ಇಬ್ಬರು ರೌಡಿಗಳ ನಡುವಿನ ವೈಷಮ್ಯಕ್ಕೆ, ಎಲ್ಲೋ ಇದ್ದ ಅಮಾಯಕನೊಬ್ಬ ಬಲಿಯಾಗಬೇಕಾ? ತನಗೂ ಅದಕ್ಕೂ ಸಂಬಂಧವೇ ಇಲ್ಲದಿದ್ದರೂ, ರಕ್ತದ ಮಡುವಿನಲ್ಲಿ ಬೀಳಬೇಕಾ? ಮೀನು ತಿನ್ನಲು ಹೋದ ಅಮಾಯಕ ಯುವಕನೊಬ್ಬ, ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಎದುರಾಳಿ ಗ್ಯಾಂಗ್ ಸದಸ್ಯನೆಂದು ತಪ್ಪಾಗಿ ಭಾವಿಸಿದ ರಕ್ಕಸರು, ಆತನ ಮೇಲೆ ಲಾಂಗು-ಮಚ್ಚುಗಳಿಂದ ಮನಬಂದಂತೆ ದಾಳಿ ನಡೆಸಿ ರಕ್ತಪಾತ ಹರಿಸಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಆಸ್ಪತ್ರೆಯ ಬೆಡ್ ಮೇಲೆ ಆ ಯುವಕ ಒದ್ದಾಡುತ್ತಿನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಪೋಲಿಸ್ ಠಾಣೆ ಬಳಿ.

ನಿನ್ನೆ ರಾತ್ರಿ ಹಳೇ ಚಂದಾಪುರದ ಬಳಿ ಇರುವ ಮೀನಂಗಡಿ ಬಳಿ ಸ್ನೇಹಿತರೊಂದಿಗೆ ಮೀನು ತಿನ್ನುತ್ತಿದ್ದ ವೇಳೆ ಗ್ಯಾಂಗ್‌ವಾರ್‌ನ ನಡುವೆ ಬಳಗಾರನಹಳ್ಳಿ ನಿವಾಸಿ ರಕ್ಷಿತ್ ಮೇಲೆ ಏಕಾಏಕಿ ಲಾಂಗು-ಮಚ್ಚು ಹಿಡಿದು ಬಂದ ಗ್ಯಾಂಗ್ ದಾಳಿ ನಡೆಸಿದೆ. ಬೊಮ್ಮಸಂದ್ರದ ಮಂಜುನಾಥ್ ಅಲಿಯಾಸ್ ವಿಲನ್, ಮನು, ಕಾರ್ತಿಕ್ ಸೇರಿದಂತೆ ಐವರು ಅಟ್ಟಾಡಿಸಿಕೊಂಡು ರಕ್ಷಿತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.

ತಲೆ, ಕೈ ಹಾಗೂ ಕಾಲುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ರಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ಬೊಮ್ಮಸಂದ್ರದ ಮಂಜುನಾಥ್ ಹಾಗೂ ಚಂದಾಪುರದ ಶಿವ ನಡುವೆ ಹಳೆಯ ವೈಷಮ್ಯವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ನೆನ್ನೆ ರಾತ್ರಿ ಮಂಜು ಮತ್ತು ಶಿವ ಇಬ್ಬರ ನಡುವೆ ದೂರವಾಣಿ ಮೂಲಕ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹಳೆ ಚಂದಾಪುರ ಸರ್ಕಲ್ ಬಳಿ ಬಾ ಎಂದು ಸವಾಲು ಹಾಕಲಾಗಿತ್ತು. ಲಾಂಗು-ಮಚ್ಚುಗಳೊಂದಿಗೆ ಸ್ಥಳಕ್ಕೆ ಬಂದ ಮಂಜುನಾಥ್ ಮತ್ತು ಆತನ ಗ್ಯಾಂಗ್ ದಾಳಿ ನಡೆಸಿದ ವೇಳೆ ಶಿವ, ಪ್ರಜ್ವಲ್ ಹಾಗೂ ಕಿಶೋರ್ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಇದೇ ವೇಳೆ ಅಲ್ಲಿ ಮೀನು ತಿನ್ನುತ್ತಿದ್ದ ರಕ್ಷಿತ್‌ನನ್ನು ಶಿವನ ಗ್ಯಾಂಗ್ ಹುಡುಗನೆಂದು ಭಾವಿಸಿ ಏಕಾಏಕಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ದಾಳಿಯ ವೇಳೆ ಶಿವ ಹಾಗೂ ಪ್ರಜ್ವಲ್‌ಗೆ ಸೇರಿದ 2 ಆಟೋಗಳ ಮೇಲೂ ಲಾಂಗು-ಮಚ್ಚುಗಳಿಂದ ದಾಳಿ ನಡೆಸಿ ಗಾಜುಗಳನ್ನ ಪುಡಿ ಪುಡಿ ಮಾಡಲಾಗಿದೆ. ಇನ್ನು ಇದೇ ವೇಳೆ ಮಾತನಾಡಿದ ಮೃತನ ತಂದೆ, ನಿನ್ನೆ ಸಂಜೆವರೆಗೂ ನನ್ನ ಮಗ ಮನೆಯಲ್ಲೇ ಇದ್ದ. ದರ್ಶನ್ ಎಂಬ ಸ್ನೇಹಿತ ಟಿಟಿ ಬಾಡಿಗೆ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿದ್ದ. ರಾತ್ರಿ 9 ಗಂಟೆ ಸುಮಾರಿಗೆ ಪೊಲೀಸರು ಕರೆ ಮಾಡಿ ನಿಮ್ಮ ಮಗನ ಮೇಲೆ ಅಟ್ಯಾಕ್ ಆಗಿದೆ ಎಂದು ತಿಳಿಸಿದರು.

ಆಸ್ಪತ್ರೆಗೆ ಹೋಗಿ ನೋಡಿದಾಗ ಲಾಂಗು-ಮಚ್ಚುಗಳಿಂದ ಮನಬಂದಂತೆ ಹಲ್ಲೆ ಮಾಡಿದ್ದರು. ನನ್ನ ಮಗನಿಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಕರೆದೊಯ್ದ ದರ್ಶನ್‌ನನ್ನು ವಿಚಾರಿಸಿದರೆ ಸತ್ಯ ಗೊತ್ತಾಗುತ್ತದೆ. ನನ್ನ ಮಗನ ಜೀವ ಉಳಿಸಬೇಕು. ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ರಕ್ಷಿತ್ ನ ತಂದೆ ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ. ಗ್ಯಾಂಗ್‌ಸ್ಟರ್‌ಗಳ ನಡುವಿನ ಈ ರಕ್ತಸಿಕ್ತ ಜಗಳದಲ್ಲಿ, ಯಾವುದೇ ತಪ್ಪಿಲ್ಲದ ಅಮಾಯಕ ಜೀವವೊಂದು ಇಂದು ಆಸ್ಪತ್ರೆಯ ಬೆಡ್ ಮೇಲೆ ನರಕಯಾತನೆ ಅನುಭವಿಸುತ್ತಿದೆ.

ರಕ್ಷಿತ್‌ನ ಈ ಸ್ಥಿತಿ ಇಡೀ ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಹುಟ್ಟುಹಾಕಿದೆ. ಒಂದೆಡೆ ಮಗನ ಪ್ರಾಣ ಉಳಿಸಲು ಕುಟುಂಬ ಆರ್ಥಿಕವಾಗಿ ಬೀದಿಗೆ ಬಿದ್ದಿದ್ದರೆ, ಮತ್ತೊಂದೆಡೆ ಹೆತ್ತ ಒಡಲು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಕಣ್ಣೀರಿಡುತ್ತಿದೆ. ಸದ್ಯ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


Spread the love

About Laxminews 24x7

Check Also

ಒಂದೇ ದಿನ ಚಿತ್ರದುರ್ಗದಲ್ಲಿ ನಾಲ್ವರು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

Spread the loveಚಿತ್ರದುರ್ಗ: ಚಿತ್ರದುರ್ಗದಲ್ಲಿ  ಬೀದಿ ನಾಯಿಗಳ (Stray Dog Attack) ದಾಳಿ ಮತ್ತೆ ಆತಂಕ ಮೂಡಿಸಿದೆ. ನಗರದ ಚೇಳಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ