ಬೆಂಗಳೂರು: ಇತ್ತೀಚಿನ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬಿಡದಿ ಸ್ಮಾರ್ಟ್ ಸಿಟಿ ಟೌನ್‌ಶಿಪ್ಯೋಜನೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದಾಖಲೆಗಳ ಸಮೇತ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲದೇ ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ ರೈತರ ಜೊತೆ ಮಾತನಾಡೋಣ ಎಂದು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸವಾಲು ಎಸೆದಿದ್ದಾರೆ.
ಮಾಜಿ ಶಾಸಕ ಮಾಗಡಿ ಮಂಜುನಾಥ್ ಮತ್ತು ಜೆಡಿಎಸ್‌ನ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್‌ಎಂ ರಮೇಶ್ ಗೌಡ ಅವರ ಜೊತೆ ಸುದ್ದಿಗೋಷ್ಠಿ ನಡೆಸಿದ ಹೆಚ್‌ಡಿಕೆ ತನ್ನ ಅವಧಿಯಲ್ಲಿ ಏನಾಗಿತ್ತು? ಅಂದು ಸದನದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದೇನು? ಈಗ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎನ್ನುವುದನ್ನು ಎಳೆಎಳೆಯಾಗಿ ತೆರೆದಿಟ್ಟರು.
2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ 5 ಕಡೆ ಟೌನ್‌ಶಿಪ್ ಯೋಜನೆ ಘೋಷಿಸಿದ್ದು ನಿಜ. ಆದರೆ 2007ರ ಜುಲೈನಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಇದೇ ಸಿದ್ದರಾಮಯ್ಯಮತ್ತು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು ಎಂದು ತಿಳಿಸಿದರು.
‘ಇದು ಫಲವತ್ತಾದ ಭೂಮಿ, ರೈತರು ಭೂಮಿ ಕೊಡಬಾರದು, ಇದೊಂದು ದೊಡ್ಡ ದಂಧೆ, ರಿಯಲ್ ಎಸ್ಟೇಟ್ ಮಾಫಿಯಾ’ ಎಂದು ಸದನದಲ್ಲಿ ಭಾಷಣ ಮಾಡಿದ್ದ ಇವರ ಅಂದಿನ ನಡಾವಳಿಗಳ (Assembly Proceedings) ಪ್ರತಿಗಳು ನನ್ನ ಬಳಿ ಇವೆ. ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ 2007ರ ಆಗಸ್ಟ್ 1 ರಂದು ನಾನು ಬಿಡದಿ ಟೌನ್‌ಶಿಪ್ ಮಾಡುವುದಿಲ್ಲ ಎಂದು ಸದನದಲ್ಲೇ ಘೋಷಿಸಿ ಯೋಜನೆ ಕೈಬಿಟ್ಟಿದ್ದೆ. 2017 ರ ಜುಲೈ ನಂತರ ಈ ಯೋಜನೆಯಲ್ಲಿ ನನ್ನ ಪಾತ್ರವೇ ಇರಲಿಲ್ಲ ಎಂದರು.
ನನ್ನನ್ನು ಯೋಜನೆಯ ಪಿತಾಮಹ ಎನ್ನುವ ಇವರು ಇಷ್ಟು ದಿನ ಏನು ಮಾಡುತ್ತಿದ್ದರು? ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ರೈತರ ಭೂಸ್ವಾಧೀನಕ್ಕೆ ಆರ್ಡರ್ ಆಗಿದ್ದೇ ಇಲ್ಲ. 2025ರ ಮಾರ್ಚ್ 12 ರಂದು ಮೊದಲ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದೇ ಡಿ.ಕೆ. ಶಿವಕುಮಾರ್. ಅಷ್ಟೇ ಅಲ್ಲದೆ, ಇತ್ತೀಚೆಗೆ ಜೂನ್ 10 ರಂದು ಈ ಸರ್ಕಾರ ಟೌನ್‌ಶಿಪ್‌ಗೆ ಫೈನಲ್ ನೋಟಿಫಿಕೇಶನ್ ಮಾಡಿದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ? ನನಗೇನಾದರೂ ಹಪಾಹಪಿ ಇದ್ದಿದ್ದರೆ 2018ರಲ್ಲಿ ನಾನೇ ಸಿಎಂ ಆಗಿದ್ದಾಗ ಈ ಪ್ರಾಜೆಕ್ಟ್ ಮಾಡಿಕೊಳ್ಳುತ್ತಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ, “ಈ ಟೌನ್‌ಶಿಪ್ ಯೋಜನೆಯ ಅಧಿಕೃತ ಕೆಲಸಗಳು ಮತ್ತು ಕಡತಗಳ ವಿಲೇವಾರಿ ಜಿಲ್ಲಾಧಿಕಾರಿ (DC) ಕಚೇರಿಯಲ್ಲಿ ನಡೆಯುತ್ತಿಲ್ಲ. ಬದಲಿಗೆ ನಾಗರಭಾವಿ ಬಳಿಯ ಒಂದು ಬಾಡಿಗೆ ಮನೆಯಲ್ಲಿ ಪುಡಾರಿಗಳು ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರನ್ನು ಕೂರಿಸಿಕೊಂಡು ಈ ದಂಧೆ ನಡೆಸಲಾಗುತ್ತಿದೆ. ಭೂಮಿ ಕೊಡಲ್ಲ ಎಂದು 4,500 ರೈತರು ಆಕ್ಷೇಪಣಾ ಅರ್ಜಿ ಸಲ್ಲಿಸಿದರೂ ಒಂದಕ್ಕೂ ಇವರು ಉತ್ತರಿಸಿಲ್ಲ. ಬದಲಾಗಿ ಡಿಸಿ ಕಚೇರಿಗೆ ರೈತರನ್ನು ಕರೆಸಿ ರೌಡಿಗಳ ಕೈಯಲ್ಲಿ ಧಮ್ಕಿ ಹಾಕಿಸಲಾಗುತ್ತಿದೆ. ಇದಕ್ಕಿಟ್ಟ ಹೆಸರೇ ಪ್ರಜಾಸೇವೆ ಇಲಾಖೆಯೇ ಎಂದು ಆಕ್ರೋಶ ಹೊರಹಾಕಿದರು.
50% ಪರಿಹಾರ, 50% ಅಭಿವೃದ್ಧಿಪಡಿಸಿದ ಜಾಗ ನೀಡುತ್ತೇವೆ ಎಂದು ರೈತರನ್ನು ನಂಬಿಸಲು ಹೊರಟಿದ್ದಾರೆ. ಇದೇ ನೈಸ್ ಕಂಪನಿ ಯೋಜನೆ ಬಂದು 30 ವರ್ಷಗಳಾದರೂ ಇನ್ನು 4,500 ರೈತರಿಗೆ ಸೈಟ್ ಕೊಟ್ಟಿಲ್ಲ. ನೈಸ್ ಕಂಪನಿಯ ಪಿತಾಮಹ ಡಿ.ಕೆ. ಶಿವಕುಮಾರ್. ನೈಸ್ ಯೋಜನೆಯ ಜಮೀನು ಡಿನೋಟಿಫಿಕೇಶನ್ ಮಾಡಿದಾಗ ನೀವೇನು ಜೈಲಿಗೆ ಹೋದ್ರಾ ಡಿಕೆಶಿಯವರೇ? ಈಗ ‘ಡಿನೋಟಿಫಿಕೇಶನ್ ಮಾಡಿದರೆ ನಾನು ಜೈಲಿಗೆ ಹೋಗಬೇಕಾ’ ಎಂದು ನಾಟಕವಾಡುತ್ತಿದ್ದೀರಿ. ರೈತರ ಪರವಾಗಿ ಪ್ರಾಮಾಣಿಕವಾಗಿ ಡಿನೋಟಿಫಿಕೇಶನ್ ಮಾಡಿದರೆ ಯಾರೂ ಜೈಲಿಗೆ ಹೋಗಲ್ಲ. ಆದರೆ ಸತ್ತವರ ಜಮೀನನ್ನು ‘ರೀ ಡೂ’ (Re-do) ಮಾಡಿದರೆ ಜೈಲಿಗೆ ಹೋಗ್ತಾರೆ. ಬಹುಶಃ ಆ ಭಯ ನಿಮಗಿರುವಂತಿದೆ” ಎಂದು ಟಾಂಗ್ ನೀಡಿದರು.
ಯಾರೋ ನಾಲ್ಕು ಜನರಿಂದ ಬ್ಯಾನರ್ ಹಾಕಿಸಿ ರೈತರು ಜಮೀನು ಕೊಡ್ತಾರೆ ಅನ್ನಿಸಬೇಡಿ. ಡಿ.ಕೆ. ಶಿವಕುಮಾರ್ ಅವರೇ, ಧೈರ್ಯವಿದ್ದರೆ ನನ್ನ ಜೊತೆ ಭೈರಮಂಗಲಕ್ಕೆ ಬನ್ನಿ, ಅಲ್ಲಿನ ಸಣ್ಣ ಸಣ್ಣ ರೈತರು ಭೂಮಿ ಕೊಡಲು ಒಪ್ಪಿದ್ದಾರಾ ಇಲ್ಲವಾ ಅಂತ ಸಾರ್ವಜನಿಕವಾಗಿಯೇ ಕೇಳೋಣ ಎಂದು ಸವಾಲು ಹಾಕಿದರು.
“6-7 ಜನಕ್ಕೆ ಶಾಸಕರಿಂದ ಚೆಕ್ ಕೊಡಿಸಿ ರೈತರನ್ನು ಉದ್ಧಾರ ಮಾಡ್ತೀವಿ ಅಂತ ನಾಟಕ ಆಡುತ್ತಿದ್ದಾರೆ. ಸಿದ್ದರಾಮಯ್ಯನವರೇ, ಇವರಿಗೆ ಸ್ವಲ್ಪ ಬುದ್ಧಿ ಹೇಳಿ. 2028ಕ್ಕೆ ಡಿಜೆ-ಬಿಕೆ ಸರ್ಕಾರ ಬರುತ್ತೆ ಅಂತ ನಿನ್ನೆ ಭಾಷಣ ಮಾಡ್ತೀರಾ, ಆದರೆ ಬೆಂಗಳೂರಿನ ರಸ್ತೆಗಳನ್ನು ನೋಡಿದರೆ ಅಸಹ್ಯ ಅನ್ನಿಸುತ್ತೆ, ಜನ ಉಗಿಯುತ್ತಿದ್ದಾರೆ. ನಾನು ಯಾವತ್ತೂ ಜನವಿರೋಧಿ ನೀತಿ ಮಾಡಿಲ್ಲ. ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿರುವ ನಿಮಗೆ ತಕ್ಕ ಉತ್ತರ ಕೊಡುವ ಕಾಲ ಅತ್ಯಂತ ಹತ್ತಿರದಲ್ಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
Laxmi News 24×7