ಕಲಬುರಗಿ,ಜ.20.(ಕ.ವಾ.)- ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಸುತ್ತಿರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಆಹಾರ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದು, ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡುವ ಮೂಲಕ ಸಂಪೂರ್ಣ ವರದಿ ನೀಡಬೇಕು. ಅಲ್ಲದೇ ಕಳಪೆ ಮಟ್ಟದ ಆಹಾರ ಸಾಮಾಗ್ರಿ ಒದಗಿಸುತ್ತಿರುವ ಏಜೆಂಟ್‍ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಪಿ.ರಾಜಾ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಾಯತ್‍ನ 17ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡುವ ಹಾಗೂ ಕರ್ತವ್ಯಲೋಪ ಹಿನ್ನೆಲೆಯಲ್ಲಿ ವಸತಿ ನಿಲಯದ ಸಿಬ್ಬಂದಿಗಳ ಮೇಲೆ ಜರುಗಿಸಿದ ಕ್ರಮಗಳ ಕುರಿತು ಮುಂದಿನ ತಿಂಗಳು ನಡೆಯುವ ಸಾಮಾನ್ಯ ಸಭೆಯಲ್ಲಿ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿ, ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಅಲ್ಲದೇ ಕನಿಷ್ಠ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಸದಸ್ಯ ಶಿವರಾಜ ಪಾಟೀಲ ಮಾತನಾಡಿ, ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಕೂಡಲೇ ತೊಗರಿ ಕೇಂದ್ರಗಳನ್ನು ತೆರೆಯಬೇಕು. ಈ ಕುರಿತು ರೈತರಿಗೆ ಮಾಹಿತಿ ಒದಗಿಸಬೇಕು. ಕಳೆದ ಬಾರಿಗಿಂತ ಈ ಬಾರಿ ತೊಗರಿ ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಭೌಗೋಳಿಕ ಸ್ಥಾನ ಸಿಕ್ಕಿದ್ದು, ಇದರಿಂದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ತೊಗರಿ ಖರೀದಿಸಿದ ನಂತರದಲ್ಲಿ ಬಹುಬೇಗನೆ ರೈತರ ಖಾತೆಗೆ ಹಣ ಸಂದಾಯವಾಗುವ ಹಾಗೂ ಪ್ರತಿ ರೈತರಿಂದ 25 ಕ್ವಿಂಟಲ್ ತೊಗರಿ ಖರೀದಿಸುವ ವ್ಯವಸ್ಥೆ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರೀತೇಂದ್ರನಾಥ ಸುಗೂರ ಮಾತನಾಡಿ, ಕಲಬುರಗಿಯಲ್ಲಿ ಈಗಾಗಲೇ 165 ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ರೈತರಿಂದ ತೊಗರಿ ಖರೀದಿಸಿದ ಮೇಲೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತ ನಂತರದಲ್ಲಿ ಹಣ ರೈತರ ಖಾತೆಗೆ ಜಮಾವಣೆಯಾಗುತ್ತದೆ. ಜಿಲ್ಲೆಯ ಗೋದಾಮಿನಲ್ಲಿ 12 ಲಕ್ಷ ಕ್ವಿಂಟಲ್ ತೊಗರಿ ಶೇಖರಣೆ ಮಾಡುವಷ್ಟು ಸ್ಥಳಾವಕಾಶವಿದೆ ಮತ್ತು ತೇವಾಂಶದ ಕುರಿತು ವಿಶೇಷ ಕಾಳಜಿಯನ್ನು ವಹಿಸಲಾಗುತ್ತಿದೆ ಎಂದರು.
ಸೇಡಂ, ಚಿಂಚೋಳಿ ಹಾಗೂ ಜೇವರ್ಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಘೋಷಿಸಿದ್ದು, ಈ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಮುಂದಿನ ತಿಂಗಳು ಹಮ್ಮಿಕೊಂಡರೆ ರೈತರಿಗೆ ಅನುಕೂ¯ವಾಗುತ್ತದೆ ಎಂದು ಜಿಲ್ಲಾ ಪಂಚಾಯತ ಸದಸ್ಯರೊಬ್ಬರು ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ.ಪಿ.ರಾಜಾ ಅವರು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯನ್ನು ರೈತರ ಕೆಲಸಗಳು ಮುಗಿದ ನಂತರದಲ್ಲಿ ಜಾರಿಗೊಳಿಸಲಾಗುತ್ತದೆ. ಅಲ್ಲದೇ ಗ್ರಾಮ ಪಂಚಾಯತಿಗಳಿಂದ ಜರುಗಿಸುವ ಶಾಲೆ ಆವರಣ ಗೋಡೆ ನಿರ್ಮಾಣ, ಸಂತೆ ಕಟ್ಟೆ, ಸಿ.ಸಿ ರಸ್ತೆ ನಿರ್ಮಾಣದಂತಹ ಕೆಲಸಗಳನ್ನು ಕೂಡಾ ಗ್ರಾಮೀಣ ರೈತರಿಗೆ ಒದಗಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ಅನೇಕ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಈ ಶಿಕ್ಷಕರಿಗೆ ಸರಿಯಾದ ರೀತಿಯಲ್ಲಿ ಗೌರವ ಧನ ನೀಡುತ್ತಿಲ್ಲ. ಶಾಲೆಯ ಮುಖ್ಯೋಪಾದ್ಯಾಯರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದರಿಂದ ಅತಿಥಿ ಶಿಕ್ಷಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಗೌರವ ಧನವನ್ನು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಜಮಾವಣೆಯಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಗೌತಮ್ ಪಾಟೀಲ್ ಹೇಳಿದರು.
ಶಿಕ್ಷಣ ಇಲಾಖೆಯ ಅಧಿಕಾರಿ ಮಾತನಾಡಿ, ಅತಿಥಿ ಶಿಕ್ಷಕರ ಖಾತೆಗೆ ನೇರವಾಗಿ ಜಮಾವಣೆ ಮಾಡಲು ಸರ್ಕಾರದಿಂದ ನಿರ್ದೇಶನವಿಲ್ಲ. ಆದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯರ ಖಾತೆಗೆ ಜಮಾ ಮಾಡಲಾಗುತ್ತದೆ. ಅವ್ಯವಹಾರ ನಡೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸಭೆಗೆ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಿಗಿ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರವೀಣ್ ಪ್ರಿಯಾ ಡೇವಿಡ್ ಸ್ವಾಗತಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್‍ನ ದಿನಚರಿ-2020ನ್ನು ಬಿಡುಗಡೆ ಮಾಡಲಾಯಿತು.