Breaking News
Home / Uncategorized / ಕೊನೆಯ ರೈತರ ತಲುಪದ ಕೃಷ್ಣೆ……?

ಕೊನೆಯ ರೈತರ ತಲುಪದ ಕೃಷ್ಣೆ……?

Spread the love

ಹುಣಸಗಿ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ವ್ಯಾಪ್ತಿಯ ಎಲ್ಲ ರೈತರಿಗೂ ನೀರು ಸಿಗಬೇಕು. ರೈತರು ಸ್ವಾವಲಂಬಿಗಳಾಗಬೇಕು’ ಎನ್ನುವ ಮೂಲ ಉದ್ದೇಶವೇ ಮಾಯವಾಗಿದೆ.

ಕಾಲುವೆ ಗೇಟ್ ಬಳಿ ಇರುವ ರೈತರು ಮಾತ್ರ ನೀರು ಪಡೆಯುತ್ತಿದ್ದು, ಇಂದಿಗೂ ಕಾಲುವೆ ಅಂಚಿನ ರೈತರು ನೀರಾವರಿಯಿಂದ ವಂಚಿತರಾಗಿದ್ದಾರೆ.

ಇದರಿಂದಾಗಿ ಕಾಲುವೆ, ಜಾಲ ಕಾಲುವೆ, ರಸ್ತೆ ಇದ್ದರೂ ಒಣ ಬೇಸಾಯವನ್ನೇ ಮಾಡಿಕೊಂಡಿದ್ದು, ನೀರಾವರಿ ಮರೀಚಿಕೆಯಂತಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ವಿತರಣಾ ಕಾಲುವೆ 6 ಇದ್ದು, ಶೇ 50ರಷ್ಟು ಪ್ರದೇಶ ಮಾತ್ರ ನೀರಾವರಿಗೆ ಒಳಪಟ್ಟಿದೆ. ಉಳಿದ ಪ್ರದೇಶ ನೀರಿನಿಂದ ವಂಚಿತವಾಗಿದೆ. ಆದರೂ ರೈತ ಸಂಘಗಳಾಗಲಿ, ಜನಪ್ರತಿನಿಧಿಗಳಾಗಲಿ, ಇತ್ತ ಗಮನ ಹರಿಸಿಲ್ಲ.

ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಅಡಿಯಲ್ಲಿ ಬರುವ ಡಿಸ್ಟ್ರಿಬ್ಯೂಷನ್ 6 ಕಾಲುವೆಯು 69 ಕ್ಯುಸೆಕ್ ನೀರು ಹರಿಸುವ ಸಾಮರ್ಥ್ಯವಿದ್ದು, 29 ಕಿ.ಮೀ ಉದ್ದವಿದೆ.ಸುಮಾರು 6,000 ಎಕರೆ ನೀರಾವರಿ ಕ್ಷೇತ್ರವಿದ್ದರೂ ಈಗ ಕೇವಲ 2,500 ಎಕರೆ ಪ್ರದೇಶಕ್ಕೆ ಮಾತ್ರ ನೀರು ಹರಿಸಲು ಸಾಧ್ಯವಾಗಿದೆ.

ದ್ಯಾಮಹಾಳ ಗ್ರಾಮದ ಬಳಿ ಆರಂಭವಾಗುವ ಈ ಕಾಲುವೆ ವ್ಯಾಪ್ತಿಯಲ್ಲಿ ಹುಣಸಗಿ, ಹುಣಸಗಿ ತಾಂಡಾ, ವಜ್ಜಲ, ಚನ್ನೂರ, ಕಲ್ಲದೇವನಹಳ್ಳಿ, ಹೆಬ್ಬಾಳ, ಬೇನಕನಹಳ್ಳಿ ಹಾಗೂ ದೇವತಕಲ್ಲ ಗ್ರಾಮಗಳು ಒಳಪಡಲಿದ್ದು, ವಜ್ಜಲವರೆಗೆ ಮಾತ್ರ ನೀರು ಹರಿಯುತ್ತಿದ್ದರಿಂದಾಗಿ ಇನ್ನುಳಿದ ಎಲ್ಲ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿವೆ. ಆದ್ದರಿಂದ ‘ಚನ್ನೂರ ಗ್ರಾಮದ ಬಳಿಯ ಹಿರೇಹಳ್ಳದಿಂದ ಪಂಪ್ ಸೆಟ್ ಮೂಲಕ ನೀರಾವರಿ ಮಾಡಿಕೊಂಡಿರುವುದಾಗಿ’ ಚನ್ನೂರ ಗ್ರಾಮದ ಶಿವನಗೌಡ ಪಾಟೀಲ ಹೇಳುತ್ತಾರೆ.

ನೀರು ಪೋಲು ಕಡಿಮೆ: ‘ಈ ಹಿಂದೆ ಕಾಲುವೆ ಜಾಲದಲ್ಲಿ ನೀರಾವರಿ ಇಲ್ಲದ ಪ್ರದೇಶದಲ್ಲಿ ಕೂಡಾ ರೈತರು ನೀರಾವರಿ ಮಾಡಿಕೊಂಡಿದ್ದು, ಅಧಿಕ ನೀರು ಪಡೆಯುತ್ತಿದ್ದರಿಂದಾಗಿ ಮುಂಭಾಗದ ರೈತರಿಗೆ ನೀರು ತಲುಪಿಸಲು ಸಾಧ್ಯವಾಗಿಲ್ಲ. ಕಾಲುವೆ ನವೀಕರಣದ ಬಳಿಕ ನೀರು ಪೋಲಾಗುವುದು ಕಡಿಮೆಯಾಗಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹಾಲಿಂಗರಾಜು ಹೊಕ್ರಾಣಿ ತಿಳಿಸಿದರು.

ತೋಟಗಾರಿಕೆ: ‘ಕಾಲುವೆಯ ನೀರು ವಂಚಿತವಾಗಿರುವ ಬಹುತೇಕ ರೈತರು ಹಳ್ಳದಿಂದ ಪಂಪ್ ಸೆಟ್ ಮೂಲಕ ತೋಟಗಾರಿಕೆ ಬೆಳೆಗಳತ್ತ ವಾಲಿದ್ದು, ನೂರಾರು ಎಕರೆ ಪ್ರದೇಶದಲ್ಲಿ ದಾಳಿಂಬೆ, ಪಪ್ಪಾಯ, ನಿಂಬೆ, ಸಜ್ಜೆ, ಹತ್ತಿ ಮತ್ತಿತರ ಬೇಸಾಯ ಮಾಡುತ್ತಿದ್ದಾರೆ’ ಎಂದು ಸಿದ್ದಾಪುರ ಗ್ರಾಮದ ನಂದಕುಮಾರ ಪೂಜಾರಿ ತಿಳಿಸಿದರು.

ದುರಸ್ತಿಯಾಗದ ಉಪಕಾಲುವೆ: ಕೆಂಭಾವಿ ಪಟ್ಟಣ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಹಾದು ಹೋಗಿರುವ ನಾರಾಯಣಪುರ ಎಡದಂಡೆ ಕಾಲುವೆಯ ಉಪಕಾಲುವೆಗಳು ಹಾಳಾಗಿದ್ದರಿಂದ ಕೊನೆ ಭಾಗದ ರೈತರು ನೀರಿನಿಂದ ವಂಚಿತರಾಗಿದ್ದಾರೆ.

ಕೆಲವು ಕಡೆ ಉಪಕಾಲುವೆಗಳಿಂದ ನೀರು ಹೋಗುವುದಕ್ಕೆ ಹೊಲಗಾಲುವೆಗಳೇ ಇಲ್ಲ. ಇನ್ನು ಕೆಲವೆಡೆ ಹೊಲಗಾಲುವೆಗಳಿದ್ದರೂ ಅಲ್ಲಲ್ಲಿ ಸಿಮೆಂಟ್ ಕಿತ್ತುಕೊಂಡು ಹೋಗಿದ್ದು, ಕಾಲುವೆ ಪಕ್ಕದ ಹೊಲಗಳಿಗೆ ನೀರು ನುಗ್ಗುವ ಸಂಭವಿದೆ ಎಂದು ಹೆದರುತ್ತ ಕಾಲುವೆ ಪಕ್ಕದಲ್ಲಿನಲ್ಲಿರುವ ರೈತರು ದಿನದೂಡುತ್ತಿದ್ದಾರೆ.

‘ಉಪಕಾಲುವೆಗಳ ದಂಡೆ ಮೇಲೆ ಗಿಡ, ಮರಗಳು ಬೆಳೆದಿರುವುದರಿಂದ ಬೇರುಗಳು ಬಿಟ್ಟು ಕಾಲುವೆ ಎಲ್ಲೆಂದರಲ್ಲಿ ಕಿತ್ತುಕೊಂಡು ಹೋಗಿದೆ. ಆ ಉಪಕಾಲುವೆಗಳ ನೀರನ್ನೇ ನಂಬಿಕೊಂಡ ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಕಾಲುವೆಗೆ ನೀರು ಬಿಡುವ ಮುನ್ನವೇ ಉಪಕಾಲುವೆಗಳನ್ನು ಸ್ವಚ್ಛಗೊಳಿಸಬೇಕಿತ್ತು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಲುವೆ ಪಕ್ಕದ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸುವುದಷ್ಟೆ ಅಲ್ಲದೇ ಹಾಳಾಗಿರುವ ಕಾಲುವೆಗಳನ್ನು ದುರಸ್ತಿ ಪಡಿಸಬೇಕಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಕೆಂಭಾವಿ ವಲಯಾಧ್ಯಕ್ಷ ಎಚ್.ಆರ್.ಬಡಿಗೇರ್ ಒತ್ತಾಯಿಸಿದ್ದಾರೆ.

‘ಕಾಲುವೆ ಒಡೆದು ಬೆಳೆ ಹಾನಿಯಾದ ಬಳಿಕ ಪರಿಹಾರ ಕೊಡುವ ಬದಲು ಈಗಲೇ ಪರಿಹಾರ ಕಂಡುಕೊಂಡರೆ ಉತ್ತಮ. ಮುಂದಿನ ದಿನದಲ್ಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನಾರಾಯಣಪುರ ಎಡದಂಡೆ ಕಾಲುವೆಯ ಉಪಕಾಲುವೆ, ಹೊಲಗಾಲುವೆಗಳನ್ನು ಸಂಪೂರ್ಣ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಕೊನೆಯ ರೈತನಿಗೆ ತಲುಪದ ನೀರು: ಶಹಾಪುರದಲ್ಲಿ ಕೊರೊನಾ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಇದು ಕೃಷ್ಣಾ ಜಲ ಭಾಗ್ಯ ನಿಗಮದ (ಕೆಬಿಜೆಎನ್‌ಎಲ್)ಕ್ಕೆ ವರವಾಗಿ ಪರಿಣಮಿಸಿದೆ. ಇದರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಕಾಲುವೆಗಳಿಗೆ ದುರಸ್ತಿ ಭಾಗ್ಯ ದೊರೆತಿಲ್ಲ.

‘ತಡವಾಗಿ ಟೆಂಡರ್ ಹಾಗೂ ಕಾಮಗಾರಿ ವಿಳಂಬ ನೀತಿಯಿಂದ ಈಗಾಗಲೇ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ತರಾತುರಿಯಲ್ಲಿ ಮುಕ್ತಾಯಗೊಳಿಸಲಾಗುತ್ತಿದೆ. ಇದರಿಂದ ಬೋಗಸ್ ಬಿಲ್ ಪಾವತಿಗೂ ಅವಕಾಶ ದೊರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತೆ ಇಲ್ಲ. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿ ಹೆಚ್ಚುವರಿ ನೀರು ನದಿಗೆ ಹರಿ ಬಿಡುತ್ತಿರುವ ಮುಖ್ಯ ಉದ್ದೇಶ ಕಾಲುವೆ ದುರಸ್ತಿಯ ನೆಪ’ ಎನ್ನುತ್ತಾರೆ ರೈತ ಮುಖಂಡ ಸಿದ್ದಯ್ಯ ಹಿರೇಮಠ.

‘ಕಾಲುವೆಯ ವಿತರಣಾ ಕಾಲುವೆ ಜಾಲದ ವ್ಯಾಪ್ತಿಯ ಹೆಚ್ಚಿನ ಕಡೆ ಜಾಲಿಗಿಡ, ತ್ಯಾಜ್ಯ ವಸ್ತು ಸಂಗ್ರಹ, ನೀರಿನ ರಭಸಕ್ಕೆ ಕುಸಿದ ಗೋಡೆ, ಕೊಚ್ಚಿ ಹೋದ ಪರ್ಸಿ ನೀರು ಸರಾಗವಾಗಿ ಸಾಗದಂತೆ ರೈತರು ಕೃತಕವಾಗಿ ನಿರ್ಮಿಸಿದ ಒಡ್ಡು ಇಂದಿಗೂ ಹಾಗೆ ಉಳಿದುಕೊಂಡಿವೆ. ನೀರು ಸಿಗುವುದು ಕಷ್ಟವಾಗುತ್ತದೆ. ಇದರಿಂದ ಕಾಲುವೆ ಕೆಳ ಭಾಗದ ರೈತರ ಗೋಳು ಮುಂದುವರೆದ ಕಥೆಯಂತೆ ಸಾಗಲಿದೆ’ ಎನುತ್ತಾರೆ ನೀರು ವಂಚಿತ ರೈತರು.

‘ರೈತರು ಒಗ್ಗೂಡಿ ನೀರು ತೆಗೆದುಕೊಳ್ಳಬೇಕು ಎಂಬ ಉತ್ತಮ ಉದ್ದೇಶದಿಂದ ನಿಗಮದ ವ್ಯಾಪ್ತಿಯಲ್ಲಿ ನೀರು ಬಳಕೆದಾರರ ಸಂಘವನ್ನು ರಚಿಸಲಾಗಿತ್ತು. ಆದರೆ, ಸಂಘಗಳು ಮಾತ್ರ ಗುತ್ತಿಗೆ ಕಾಮಗಾರಿ ಪಡೆಯಲು ಮಾತ್ರ ಸೀಮಿತವಾಗಿ ಉಳಿದುಕೊಂಡವು. ಮುಂದೆ ಕಾಲುವೆ ದುರಸ್ತಿಯ ಗೋಜಿಗೆ ಹೋಗಲಿಲ್ಲ. ಅಲ್ಲದೆ ನೀರಿನ ಕರವನ್ನು ರೈತರಿಂದ ಸಂಗ್ರಹಿಸಲು ಹಿಂದೇಟು ಹಾಕಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ಕರ ಬಾಕಿ ಉಳಿದುಕೊಂಡಿದೆ. ಎರಡು ಸಮೃದ್ಧಿ ಬೆಳೆ ಬೆಳೆದರೂ ರೈತರು ನೀರಾವರಿ ಕರ ಪಾವತಿಸಲು ಮುಂದೆ ಬರುತ್ತಿಲ್ಲ’ ಎಂದು ನಿಗಮದ ಎಂಜಿನಿಯರ್ ಒಬ್ಬರು ಬೇಸರ ವ್ಯಕ್ತಪಡಿಸಿದರು.

ಕೆಬಿಜೆಎನ್‌ಎಲ್ ಕೈಬಿಟ್ಟರೂ ಹೊಲಗಾಲುವೆಗಳನ್ನು ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಸ್ವಚ್ಛ ಮಾಡಿಕೊಂಡು ನೀರು ಸರಾಗವಾಗಿ ಸಾಗುವಂತೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಪ್ರಸಕ್ತ ಬಾರಿ ತುಸು ಅಧಿಕ ಎನ್ನುಷ್ಟು ಮುಂಗಾರು ಕೃಪೆ ತೋರಿದ್ದರಿಂದ ಕಾಲುವೆ ನೀರಿನ ಮೇಲೆ ಒತ್ತಡ ಬೀಳುತ್ತಿಲ್ಲ. ಆದರೆ, ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ನಾಟಿ ಮಾಡುತ್ತಿರುವ ರೈತರು ನೀರಿಗಾಗಿ ಹಾತೊರೆಯುತ್ತಿದ್ದಾರೆ.


Spread the love

About Laxminews 24x7

Check Also

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ’ : ನಿರ್ಮಲಾ ಸೀತಾರಾಮನ್ ಘೋಷಣೆ

Spread the loveನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಣಕಾಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ