ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಜನರ ಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ. ಹೀಗಾಗಿ ಕರ್ನಾಟಕ ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಬೇರೆ ರಾಜ್ಯಗಳ ಪೈಕಿ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯದ ಉಪಚುನಾವಣೆ, ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣದಲ್ಲಿ ಇಷ್ಟೆಲ್ಲಾ ಗೊಂದಲ ಆದಮೇಲೆ 25-30 ಸಾವಿರ ಅಂತರದ ಗೆಲುವು ಸಿಗುವುದಿಲ್ಲ ಎಂಬುದು ಗೊತ್ತಿತ್ತು. ಆದರೆ ಆರಾಮವಾಗಿ ಗೆಲ್ಲುತ್ತೇವೆ ಎಂದು ಗೊತ್ತಿತ್ತು. ಎಸ್‌ಡಿಪಿಐನಿಂದ ಅಪಾಯವಾಗಿದೆ. ಎಸ್‌ಡಿಪಿಐ ಅನ್ನು ಹಗುರವಾಗಿ ನಾವು ಪರಿಗಣಿಸಿರಲಿಲ್ಲ. ಅದೂ ಸಹ ರಾಜಕೀಯ ಪಕ್ಷ. ಅವರು ಅಲ್ಪಸಂಖ್ಯಾತರ ಮತ ತೆಗೆದುಕೊಂಡರು ಎಂದರು.
ಪಂಚ ರಾಜ್ಯಗಳ ಫಲಿತಾಂಶದಿಂದ ನಮ್ಮ ರಾಜ್ಯಕ್ಕೆ ಏನೂ ಆಗುವುದಿಲ್ಲ. ಒಂದಷ್ಟು ಜನಕ್ಕೆ ಸಂತೋಷ, ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ಅವರಿಗೆ ಏನೂ ಮಾಡಲಿಲ್ಲ. ಇದೇ ವೇಳೆ ಕೇರಳದಲ್ಲಿ ಯುಡಿಎಫ್ ಮೈತ್ರಿಯ ಗೆಲುವಿನ ಬಗ್ಗೆ ಮಾತನಾಡಿ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಾವು ಗೆದ್ದಿದ್ದೆವು. ಎಲ್‌ಡಿಎಫ್ 10 ವರ್ಷಗಳ ಕಾಲ ಆಡಳಿತ ನಡೆಸಿದೆ. ಅದಕ್ಕೆ ಜನ ಬದಲಾವಣೆ ಬೇಕು ಎಂದು ಫಲಿತಾಂಶ ನೀಡಿದ್ದಾರೆ. ಪ್ರಚಾರಕ್ಕೂ ಹೋದಾಗಲೂ ಜನ ನಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿದರು.
ಶೃಂಗೇರಿ ಮರುಎಣಿಕೆ ಫಲಿತಾಂಶ ಇಡೀ ದೇಶಕ್ಕೇ ಮಾರಕ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಆದರೆ ಇಲ್ಲಿ ನಡೆದಿರುವುದು ಷಡ್ಯಂತ್ರ. ಅತ್ಯಂತ ಆಘಾತಕಾರಿ ವಿಚಾರ. ನಾವು ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿಸುತ್ತೇವೆ. ಕಾನೂನಾತ್ಮಕವಾಗಿಯೂ ಹೋರಾಟ ಮಾಡುತ್ತೇವೆ. ಇದೊಂದು ಅಂತಾರಾಷ್ಟ್ರೀಯ ಸಂಚಿನ ರೀತಿ ನಡೆದಿದೆ. ನಮಗೆ ಅನುಮಾನ ಇದ್ದರೆ ಸುಪ್ರೀಂ ಕೋರ್ಟಿಗೆ ಹೋಗುತ್ತಿದ್ದೆವು. ಇಲ್ಲಿ ಮತ ಎಣಿಕೆ ಬಾಕ್ಸ್ಗಳನ್ನು ತೆರೆಯಲಾಗಿದೆ. ಕೆಲವರನ್ನು ಉಪಯೋಗಿಸಿಕೊಂಡು ನಮಗೆ ಮತ ಬಿದ್ದ ಬ್ಯಾಲೆಟ್ ಪೇಪರ್‌ಗಳ ಮೇಲೆ ಮತ್ತೊಂದು ಗುರುತು ಹಾಕಲಾಗಿದೆ. ಎಲ್ಲಾ ಬಂಡಲ್‌ಗಳು ಮಾನ್ಯ ಎಂದು ತೀರ್ಮಾನ ಆದ ಮೇಲೆ ಈ ತಿದ್ದುಪಡಿ ಹೇಗಾಯಿತು ಎಂದರು.
ಇಂತಹವರಿಗೆ ಮತ ಬಿದ್ದಿದೆ ಎಂದು ಪ್ರತಿ ಮತಗಳನ್ನು ಎಲ್ಲರಿಗೂ ತೋರಿಸಿರುತ್ತಾರೆ. ಇದನ್ನು ಕ್ಯಾಮರಾದಲ್ಲಿಯೂ ದಾಖಲೀಕರಣ ಮಾಡಿಕೊಳ್ಳಲಾಗಿರುತ್ತದೆ. ಎಲ್ಲಾ ಎಣಿಕೆಯಾದ ಮೇಲೆ ಬಂಡಲ್ ಗಳನ್ನು ಒಳಗೆ ಹಾಕಿ ಸೀಲ್ ಮಾಡಲಾಗಿರುತ್ತದೆ. ಇದಾದ ನಂತರ ಬಂಡಲ್ ತೆಗೆದು ಮತ್ತೊಂದು ಗುರುತು ಮಾಡಲಾಗಿದೆ. ಈಗ ಅದು ಮಾತ್ರ ಎಣಿಕೆಯಾಗಬೇಕು ಎಂದು ನ್ಯಾಯಲಯದ ಮೂಲಕ ಆದೇಶ ತಂದು ಈ ರೀತಿ ಮಾಡಲಾಗಿದೆ ಎಂದರು.
ಇದರ ಬಗ್ಗೆ ದೊಡ್ಡ ತನಿಖೆ ಅವಶ್ಯಕತೆಯಿದೆ. ಈ ಹಿಂದೆ ಫಲಿತಾಂಶ ಸರಿಯಾಗಿತ್ತು ಎಂದು ಎಲ್ಲರೂ ಸಹಿ ಮಾಡಿದ್ದಾರೆ. ಚುನಾವಣಾ ಆಯೋಗದ ಬಳಿಯೂ ದಾಖಲೆಯಿದೆ. ಆದರೆ ಮರು ಎಣಿಕೆಯಲ್ಲಿ ಬದಲಾವಣೆಯಾಗಿದೆ. ಒಬ್ಬರಿಗೆ ಮತ ಬಿದ್ದ ಕಡೆ ಇನ್ನೊಬ್ಬರಿಗೂ ಗುರುತು ಹಾಕಲಾಗಿದೆ. ಇದರ ಬಗ್ಗೆ ದೂರನ್ನು ಸಹ ನೀಡಲಾಗಿದೆ ಎಂದು ಆರೋಪಿಸಿದರು.
ಫಲಿತಾಂಶದ ಬಗ್ಗೆ ರಿಟರ್ನಿಂಗ್ ಆಫೀಸರ್ ನ್ಯಾಯಲಯಕ್ಕೆ ಕಳುಹಿಸಬೇಕಿತ್ತು. ಸಂಬಂಧಿಸಿದ ಅಧಿಕಾರಿ ಇದನ್ನೆಲ್ಲಾ ಗಮನಿಸಿದ್ದಾರೆ. ಇದು ಇಡೀ ರಾಜ್ಯಕ್ಕೆ ಕಳಂಕದ ಪ್ರಕರಣ. ಈ ಹಿಂದೆ ನಾಯಕರೊಬ್ಬರು ಸಹಕಾರಿ ಚುನಾವಣೆ ವೇಳೆ ಮತಪತ್ರವನ್ನೇ ನುಂಗಿದ್ದರು. ಈಗ ಇಲ್ಲಿಯೂ ಹೆಚ್ಚಿನ ಗುರುತು ಮಾಡಿ, ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಎಸಗಲಾಗಿದೆ. ಗಾಯತ್ರಿ ಶಾಂತನಗೌಡ ಅವರ ವಿಚಾರವನ್ನು ನ್ಯಾಯಲಯದಲ್ಲಿ ಬ್ಲಾಕ್ ಮಾಡಿಕೊಂಡೆ ಬರುತ್ತಿದ್ದಾರೆ. ಸೌಮ್ಯ ರೆಡ್ಡಿ ಅವರು 12 ಮತಗಳ ಅಂತರದಲ್ಲಿ ಸೋತಿದ್ದಾರೆ. ಅದು ಇನ್ನು ಎಣಿಕೆಯಾಗಿಲ್ಲ. ಇದು ಹೇಗೆ ಎಣಿಕೆಯಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
Laxmi News 24×7