ಕಲಬುರಗಿ,ಮಾ.16- ಡೆಡ್ಲಿ ಕೊರೋನಾ ವೈರಸ್‍ನಿಂದ ಕಲಬುರಗಿಯ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಜನತೆಯ ಆತಂಕ ದೂರ ಮಾಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತ್ರ ಜಿಲ್ಲೆಯ ಕಡೆ ತಲೆ ಹಾಕಿಲ್ಲ.
ಮಹಾಮಾರಿ ಕರೋನಾಕ್ಕೆ ಹೆದರಿ ಕಲಬುರಗಿ ಕಡೆಗೆ ಸಚಿವರು ಬರುತ್ತಿಲ್ಲ. ಇವರ ಈ ನಡೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದಲ್ಲೇ ಕೊರೋನಾಕ್ಕೆ ಮೊದಲ ಬಲಿ ಕಲಬುರಗಿಯಲ್ಲಿ ಆಗಿದ್ದು, ಕಲಬುರಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕೊರೋನಾ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ.
ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಖುದ್ದು ನಿಂತು ಕಾಯಿಲೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು. ಲೋಕೋಪಯೋಗಿ ಸಚಿವರೂ, ಉಪ ಮುಖ್ಯಮಂತ್ರಿಗಳೂ ಆದ ಗೋವಿಂದ ಕಾರಜೋಳ ಸಾಹಿತ್ಯ ಸಮ್ಮೇಳನದ ನಂತರ ಭೇಟಿಯೇ ನೀಡಿಲ್ಲ. ಕೊರೋನಾ ಹರಡಿ ಜಿಲ್ಲೆಯ ಜನ ಆತಂಕಗೊಂಡರೂ ಕೂಡ ಕನಿಷ್ಟ ಅವರಿಗೆ ಅಭಯ ಹೇಳುವ ಕೆಲಸವನ್ನೂ ಮಾಡಿಲ್ಲ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಸಚಿವರಾದ ಶ್ರೀರಾಮುಲು ಅವರು ಕಳೆದ ಎರಡು ದಿನಗಳಿಂದ ಕಲಬುರಗಿಯಲ್ಲಿಯೇ ಮೊಕ್ಕಾ ಹೂಡಿ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರು ಮಾತ್ರ ಕಾಣಿಸುತ್ತಿಲ್ಲ. ಕೊರೋನಾದಿಂದ ಸಾವು ನೋವು ಸಂಭವಿಸಿದರು. ಇವರು ಕಾಣದಿರುವುದು ಅಸಮಾಧಾನವನ್ನು ಉಂಟುಮಾಡಿದೆ.