Breaking News

ರೈಲಿನಲ್ಲಿ ಈ ತಪ್ಪು ಮಾಡಿದರೆ ದಂಡ, ಜೈಲು ಶಿಕ್ಷೆ

Spread the love

ರೈಲು ಪ್ರಯಾಣದ ವೇಳೆ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವುದು, ಸ್ಪೀಕರ್‌ನಲ್ಲಿ ಹಾಡು ಅಥವಾ ವಿಡಿಯೋಗಳನ್ನು ಪ್ಲೇ ಮಾಡಿ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ಇನ್ಮುಂದೆ ಸಂಕಷ್ಟ ಎದುರಾಗಲಿದೆ.

ಇಂತಹ ವರ್ತನೆಗೆ ಕಡಿವಾಣ ಹಾಕಲು ದಕ್ಷಿಣ ರೈಲ್ವೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡದ ಜತೆಗೆ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದೆ.

ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಶಬ್ದ ಮಾಲಿನ್ಯ ಉಂಟುಮಾಡುವ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈನಲ್ಲಿರುವ ದಕ್ಷಿಣ ರೈಲ್ವೆಯ ಪ್ರಧಾನ ಕಚೇರಿ ಅಕ್ಟೋಬರ್ 6ರಂದು ತನ್ನ ವ್ಯಾಪ್ತಿಯ ಎಲ್ಲ ವಿಭಾಗಗಳಿಗೆ ಸುತ್ತೋಲೆ ಹೊರಡಿಸಿದೆ. ರೈಲು ಪ್ರಯಾಣದ ವೇಳೆ ಇತರರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಕುರಿತು ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವಂತೆಯೂ ಸೂಚಿಸಿದೆ.

ರೈಲಿನಲ್ಲಿ ಜೋರಾಗಿ ಮೊಬೈಲ್‌ನಲ್ಲಿ ಮಾತನಾಡುವುದು, ಸ್ಪೀಕರ್ ಮೂಲಕ ಹಾಡುಗಳನ್ನು ಕೇಳುವುದು ಅಥವಾ ವಿಡಿಯೋಗಳನ್ನು ವೀಕ್ಷಿಸುವುದರಿಂದ ಸಹಪ್ರಯಾಣಿಕರ ನಿದ್ದೆ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆ. ಇಂತಹ ವರ್ತನೆ ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಅಡಿಯಲ್ಲಿ ಕ್ರಮಕ್ಕೆ ಕಾರಣವಾಗಬಹುದು. ನಿಯಮ ಉಲ್ಲಂಘಿಸಿದವರಿಗೆ ₹1,000ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ರೈಲ್ವೆ ಇಲಾಖೆ ಎಚ್ಚರಿಸಿದೆ.

ಪ್ರಯಾಣಿಕರು ಮೊಬೈಲ್‌ನಲ್ಲಿ ಆಡಿಯೋ ಅಥವಾ ವಿಡಿಯೋಗಳನ್ನು ವೀಕ್ಷಿಸುವಾಗ ಇಯರ್‌ಫೋನ್ ಬಳಸುವಂತೆ ಸೂಚಿಸಲಾಗಿದೆ. ರೈಲು ನಿಲ್ದಾಣಗಳು ಹಾಗೂ ಬೋಗಿಗಳಲ್ಲಿ ಈ ಕುರಿತು ಪ್ರಕಟಣೆಗಳನ್ನು ನೀಡುವುದರ ಜತೆಗೆ, ಸ್ಥಳೀಯ ಭಾಷೆಗಳು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಧ್ವನಿವರ್ಧಕಗಳ ಮೂಲಕ ನಿರಂತರ ಜಾಗೃತಿ ಮೂಡಿಸಲು ನಿರ್ದೇಶಿಸಲಾಗಿದೆ.

ರೈಲಿನಲ್ಲಿ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಟಿಕೆಟ್ ಪರೀಕ್ಷಕರು ಸೇರಿದಂತೆ ವಾಣಿಜ್ಯ ವಿಭಾಗದ ಸಂಬಂಧಪಟ್ಟ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲೇ ₹1,000 ದಂಡ ವಿಧಿಸುವ ಕ್ರಮಕ್ಕೆ ಸೂಚನೆ ನೀಡಲಾಗಿದೆ.

ರೈಲು ಪ್ರಯಾಣದ ವೇಳೆ ಮೊಬೈಲ್ ಬಳಕೆಯಿಂದ ಉಂಟಾಗುವ ತೊಂದರೆ ಹೊಸದಲ್ಲ. 2012ರಲ್ಲಿಯೇ ರೈಲ್ವೆ ಮಂಡಳಿಯು ಎಸಿ ಬೋಗಿಗಳಲ್ಲಿ ಜೋರಾಗಿ ಮಾತನಾಡುವುದು ಮತ್ತು ಕಿರಿಕಿರಿ ಉಂಟುಮಾಡುವ ರಿಂಗ್‌ಟೋನ್‌ಗಳ ಬಳಕೆಯನ್ನು ನಿಯಂತ್ರಿಸಲು ಮೊಬೈಲ್‌ಗಳನ್ನು ಸೈಲೆಂಟ್ ಅಥವಾ ವೈಬ್ರೇಷನ್ ಮೋಡ್‌ನಲ್ಲಿ ಇಡುವಂತೆ ಸೂಚಿಸಿತ್ತು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚಾದ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಸ್ಪೀಕರ್ ಮೂಲಕ ವಿಡಿಯೋ ವೀಕ್ಷಿಸುವುದು ಮತ್ತು ಹಾಡುಗಳನ್ನು ಜೋರಾಗಿ ಕೇಳುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಸಹಪ್ರಯಾಣಿಕರ ನೆಮ್ಮದಿಗೆ ಧಕ್ಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ, ಈಗ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗಿದೆ.

ದಕ್ಷಿಣ ರೈಲ್ವೆಯ ಚೆನ್ನೈ, ಪಾಲಕ್ಕಾಡ್, ತಿರುವನಂತಪುರಂ, ತಿರುಚಿರಾಪಳ್ಳಿ, ಮಧುರೈ ಮತ್ತು ಸೇಲಂ ವಿಭಾಗಗಳ ಹಿರಿಯ ವಾಣಿಜ್ಯ ವ್ಯವಸ್ಥಾಪಕರಿಗೆ ಈ ಸಂಬಂಧ ನಿರ್ದೇಶನ ನೀಡಲಾಗಿದೆ. ರೈಲು ಪ್ರಯಾಣ ಎಲ್ಲರಿಗೂ ಆರಾಮದಾಯಕವಾಗಿರಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ: ಚಾಲಕ ಸ್ಥಳದಲ್ಲೇ ಸಾವು

Spread the loveಬೆಳಗಾವಿ: ಬುಲೆರೋ ವಾಹನ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬುಲೆರೋ ಚಾಲಕ ಸ್ಥಳದಲ್ಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ