ಬೆಳಗಾವಿ: ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ, ಇದೇ ಮೊದಲ ಬಾರಿಗೆ ಆದಾಯ ಹಂಚಿಕೆ (Profit Sharing) ಸೂತ್ರದಡಿ ಕಬ್ಬಿನ ಬೆಲೆ ನಿಗದಿಪಡಿಸಲು ನಿರ್ಧರಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಈ ನೂತನ ಸೂತ್ರವನ್ನು ರೂಪಿಸಲಾಗಿದೆ. ರೈತರ ಬೇಡಿಕೆಗಳಿಗೆ ಪೂರಕವಾಗಿರುವ ಈ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಕೂಡ ಸಹಮತ ಸೂಚಿಸಿರುವುದು ವಿಶೇಷವಾಗಿದೆ.
ಈ ಹಿಂದೆ ಕಾರ್ಖಾನೆಗಳ ಒಟ್ಟು ಆದಾಯದ ಆಧಾರದ ಮೇಲೆ ಲಾಭ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ನೂತನ ಸೂತ್ರದ ಪ್ರಕಾರ ಸಕ್ಕರೆ ಮಾರಾಟದಿಂದ ಬರುವ ಸರಾಸರಿ ಲಾಭವನ್ನು ಆಧಾರವಾಗಿಟ್ಟುಕೊಂಡು ರೈತರಿಗೆ ಲಾಭ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ರಾಷ್ಟ್ರಮಟ್ಟದಲ್ಲೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿರುವ ಈ ಪ್ರಯೋಗದಿಂದ ಮುಂಬರುವ ದಿನಗಳಲ್ಲಿ ಕಬ್ಬು ಪೂರೈಸುವ ರೈತರಿಗೆ ಹೆಚ್ಚಿನ ದರ ದೊರೆಯುವ ನಿರೀಕ್ಷೆಯಿದೆ. ಕಬ್ಬು ಬೆಳೆಗಾರರ ಹಿತಾಸಕ್ತಿಗೆ ಆದ್ಯತೆ ನೀಡುವ ಈ ನಿರ್ಧಾರ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.
Laxmi News 24×7