Breaking News

ರಾಜ್ಯದಲ್ಲಿ ಸಿಎಂ ಬದಲಾವಣೆಯಾದ್ರೂ ಅಭಿವೃದ್ಧಿ ಮಾತ್ರ ಆಗಲ್ಲ: ವಿಜಯೇಂದ್ರ

Spread the love

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ರಾಜೀನಾಮೆ ನೀಡಿ, ಹೊಸ ಮುಖ್ಯಮಂತ್ರಿ  ಬಂದರೂ ಯಾವುದೇ ಬದಲಾವಣೆ ಆಗುವುದಿಲ್ಲ, ಅಭಿವೃದ್ಧಿಯೂ ಸಾಧ್ಯವಿಲ್ಲ. ನಾಡಿನ ಜನರ ವಿಶ್ವಾಸ ಗೆದ್ದು ಅಧಿಕಾರಕ್ಕೆ ಬಂದ ಕಾಂಗ್ರೆಸ್  ಜನರಿಗೆ ಸಂಪೂರ್ಣವಾಗಿ ಮೋಸ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ನಾಯಕತ್ವ ಬದಲಾವಣೆ ಚರ್ಚೆ ಹಾಗೂ ಹಿಂದುಳಿದ ವರ್ಗಗಳ ವಿವಾದಾತ್ಮಕ ಜಾತಿಸಮೀಕ್ಷೆ ವರದಿ ಕುರಿತು ಸರಣಿ ಆರೋಪ ಮಾಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಗೆ ಸಂಬಂಧಿಸಿದಂತೆ ಲೇವಡಿ ಮಾಡಿದ ವಿಜಯೇಂದ್ರ, ಗ್ಯಾರಂಟಿ ಯೋಜನೆಗಳಿಗೆ ಹಣ ವಿನಿಯೋಗ ಮಾಡಲು ಸರ್ಕಾರ ಈಗಾಗಲೇ ಹರಸಾಹಸ ಪಡುತ್ತಿದೆ. ಒಂದು ವೇಳೆ ನಾಯಕತ್ವ ಬದಲಾವಣೆಯಾಗಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಸಿಎಂ ಕುರ್ಚಿಯಲ್ಲಿ ಕೂತರೂ ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ನಿಭಾಯಿಸುವುದರಲ್ಲೇ ಶಿವಕುಮಾರ್  ಅವರಿಗೆ ಎರಡು ವರ್ಷ ಕಳೆದುಹೋಗುತ್ತದೆ ಎಂದರು.

ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳಿಗೆ ಘೋರ ಅನ್ಯಾಯ ಎಸಗಿದ್ದಾರೆ. ಸುಮಾರು 400 ಕೋಟಿ ರೂ. ವೆಚ್ಚದ ಕಾಂತರಾಜು ವರದಿಯನ್ನು ಹಾಳುಗೆಡವಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅವರು ಹಿಂದುಳಿದ ವರ್ಗಗಳಿಗೆ ಯಾವುದೇ ನ್ಯಾಯ ಒದಗಿಸಿಲ್ಲ. ಪ್ರಸ್ತುತ ಚರ್ಚೆಯಲ್ಲಿರುವ ಹಿಂದುಳಿದ ವರ್ಗಗಳ ಜಾತಿಸಮೀಕ್ಷೆ ವರದಿ ತೀರಾ ಅವೈಜ್ಞಾನಿಕವಾಗಿದೆ ಎಂದು ಕಿಡಿಕಾರಿದರು.

ಶಾಲಾ ಮಕ್ಕಳಲ್ಲಿ ದ್ವೇಷದ ವಿಷಬೀಜ ಬಿತ್ತಿದ ಸರ್ಕಾರ:
ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ತಂದು ಶಾಲಾ ಮಕ್ಕಳ ಎಳೆಯ ಮನಸ್ಸಿನಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಸೃಷ್ಟಿಸುವ ಹಾಗೂ ತಾರತಮ್ಯದ ವಿಷಬೀಜ ಬಿತ್ತುವ ಕೆಲಸ ಮಾಡಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದ ಜನತೆ ಕೇವಲ ಆಡಳಿತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳ ಬಗ್ಗೆಯೂ ಜನರಿಗೆ ಯಾವುದೇ ಭರವಸೆ ಉಳಿದಿಲ್ಲ. ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಆಪಾದಿಸಿದರು.

ಜವಾಬ್ದಾರಿಯುತವಾಗಿ ಬಿಜೆಪಿ ಹೋರಾಟ:
ಕಾಂಗ್ರೆಸ್‌ನ ಈ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಸುಮ್ಮನೆ ಕೂರುವುದಿಲ್ಲ. ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಬಿಜೆಪಿ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ನಿರಂತರ ಹೋರಾಟ ಮಾಡುತ್ತದೆ. ಇದರೊಂದಿಗೆ ರಾಜ್ಯಾದ್ಯಂತ ಪಕ್ಷದ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಕೋರಿದ ಡಾ.ಪ್ರಭಾಕರ ಕೋರೆ

Spread the loveಬೆಳಗಾವಿ: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಬೆಳಗಾವಿ ಕೆಎಲ್‌ಇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ