ಮಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆ ಕಂಡಿದೆ.
ಬಂಟ್ವಾಳದ ಕೊರೊನಾ ಸೋಂಕಿತ ಮಹಿಳೆ ಏಪ್ರಿಲ್ 19ರಂದು ಮೃತರಾಗಿದ್ದರು. ಈ ಬೆನ್ನಲ್ಲೇ ಕೊರೊನಾ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಮೃತ ಮಹಿಳೆಯ ಅತ್ತೆ ಕೂಡ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎರಡನೇ ಸಾವು ಇದಾಗಿದೆ.
75 ವರ್ಷದ ವೃದ್ಧೆ ಏಪ್ರಿಲ್ 18ರಿಂದ ಪಾರ್ಶ್ವವಾಯುಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಅವರನ್ನು ಮಂಗಳೂರಿನ ಕೋವಿಡ್-19 ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾರೆ.
ವೃದ್ಧೆಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆ ಏರಿಯಾವನ್ನು ಕ್ವಾರಂಟೈನ್ ಮಾಡಲಾಗಿದೆ.
ರಾಜ್ಯದಲ್ಲಿ ಇಂದು 18 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಂಗಳೂರಿನಲ್ಲಿ 10 ಜನರಿಗೆ ಕೊರೊನಾ ದೃಢಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ಬೆಂಗಳೂರಿನ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.
ಇಂದು ಬೆಂಗಳೂರಿನಲ್ಲಿ 10, ವಿಜಯಪುರ, ಹುಬ್ಬಳ್ಳಿ ಮತ್ತು ಮಂಡ್ಯದಲ್ಲಿ ತಲಾ ಇಬ್ಬರು ಸೋಂಕಿತರು ಪತ್ತೆಯಾದರೆ, ದಕ್ಷಿಣ ಕನ್ನಡ ಹಾಗೂ ಕಲಬುಗಿಯ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ವಿಜಯಪುರದ ರೋಗಿ-429, 25 ವರ್ಷದ ಮಹಿಳೆಗೆ ಸೋಂಕು ಹೇಗೆ ತಗುಲಿತು ಎಂಬುದರ ಬಗ್ಗೆ ತಿಳಿದು ಬಂದಿಲ್ಲ.