ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಅಮಾಯಕ ವ್ಯಕ್ತಿಯೊಬ್ಬರ ಜೀವವನ್ನು ಬಲಿ ಪಡೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಮೊಟ್ಟೆ ಖರೀದಿ ವೇಳೆ ಹಣದ ವಿಚಾರವಾಗಿ ಆರಂಭವಾದ ವಾಗ್ವಾದ, ತಳ್ಳಾಟ ಹಲ್ಲೆಗೆ ತಿರುಗಿ, ಗೂಡಂಗಡಿ ನಡೆಸುತ್ತಿದ್ದ 55 ವರ್ಷದ ಶಿವಾಜಿರಾವ್ ಬೈರೋಜಿ ಸಾವನ್ನಪ್ಪಿದ್ದಾರೆ. ಪ್ರಕರಣದ ಸಂಬಂಧ ನಾಲ್ವರು ಯುವಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ವಿಶೇಷ ತಂಡ ಶೋಧ ಮುಂದುವರಿಸಿದೆ.
ಘಟನೆ ರಟ್ಟಿಹಳ್ಳಿಯ ಜನತಾ ಪ್ಲಾಟ್ ಪ್ರದೇಶದಲ್ಲಿ ಮಂಗಳವಾರ ಸಂಜೆ ನಡೆದಿದೆ. ಶಿವಾಜಿರಾವ್ ಬೈರೋಜಿ ತಮ್ಮ ಪುತ್ರ ಭರತ್ ಜೊತೆಗೂಡಿ ಗೂಡಂಗಡಿ ನಡೆಸುತ್ತಿದ್ದರು. ಸಂಜೆ ಸುಮಾರು 7 ಗಂಟೆ ವೇಳೆಗೆ ವಾಸೀಮ್ ಮುಲ್ಲಾ ಎಂಬ ಯುವಕ ಅಂಗಡಿಗೆ ಬಂದು ಐದು ಮೊಟ್ಟೆಗಳನ್ನು ಖರೀದಿಸಿದ್ದಾನೆ. ಹಣ ಪಾವತಿಸುವ ವೇಳೆ ತಾನು 500 ರೂ. ನೋಟು ನೀಡಿದ್ದೇನೆ ಎಂದು ವಾಸೀಮ್ ಹೇಳಿದ್ದರೆ, ಅಂಗಡಿ ಕಡೆಯವರು 100 ರೂ. ಮಾತ್ರ ನೀಡಿದ್ದೀರಿ ಎಂದು ತಿಳಿಸಿದ್ದರಿಂದ ಇಬ್ಬರ ನಡುವೆ ತೀವ್ರ ವಾಗ್ವಾದ ಆರಂಭವಾಗಿದೆ.
ವಾದ ಹೆಚ್ಚಾಗುತ್ತಿದ್ದಂತೆ ವಾಸೀಮ್ ಮತ್ತು ಭರತ್ ಬೈರೋಜಿ ನಡುವೆ ಮಾತಿನ ಚಕಮಕಿ ಜೋರಾಗಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿದೆ. ಈ ವೇಳೆ ಅಲ್ಲೇ ಇದ್ದ ವಾಸೀಮ್‌ನ ಸಹೋದರರಾದ ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಸಿರಾಜ್ ಮುಲ್ಲಾ ಕೂಡ ಸ್ಥಳಕ್ಕೆ ಬಂದು ಜಗಳದಲ್ಲಿ ಭಾಗಿಯಾಗಿದ್ದಾರೆ.
ಜಗಳ ತೀವ್ರವಾಗುತ್ತಿದ್ದಂತೆ ಮಗನನ್ನು ರಕ್ಷಿಸಲು ಹಾಗೂ ಗಲಾಟೆ ಶಮನಗೊಳಿಸಲು ಶಿವಾಜಿರಾವ್ ಮಧ್ಯಪ್ರವೇಶಿಸಿದ್ದಾರೆ. ಆದರೆ ಆರೋಪಿಗಳು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಶಿವಾಜಿರಾವ್ ಅವರನ್ನು ನೆಲಕ್ಕೆ ಕೆಡವಿ ಎದೆ ಭಾಗಕ್ಕೆ ಕಾಲಿನಿಂದ ತುಳಿದ ಪರಿಣಾಮ ಅವರು ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಯಲ್ಲಿ ಶಿವಾಜಿರಾವ್ ಅವರ ಪುತ್ರ ಭರತ್ ಬೈರೋಜಿಗೂ ಗಾಯಗಳಾಗಿದ್ದು, ಅವರನ್ನು ರಟ್ಟಿಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಬಳಿಕ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಭರತ್ ಬೈರೋಜಿ ನೀಡಿದ ದೂರಿನ ಮೇರೆಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಸೀಮ್ ಮುಲ್ಲಾ, ಸರ್ಪರಾಜ್ ಮುಲ್ಲಾ, ಸಾದಿಕ್ ಮುಲ್ಲಾ ಹಾಗೂ ಶಿರಾಜ್ ಮುಲ್ಲಾ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ವಾಸೀಮ್, ಸರ್ಪರಾಜ್ ಮತ್ತು ಸಾದಿಕ್ ಅವರನ್ನು ಬಂಧಿಸಿದ್ದಾರೆ. ಸಿರಾಜ್ ಮುಲ್ಲಾ ಇನ್ನೂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಮುಂದುವರಿದಿದೆ.
ಮರಣೋತ್ತರ ಪರೀಕ್ಷೆಯ ಬಳಿಕ ಶಿವಾಜಿರಾವ್ ಅವರ ಪಾರ್ಥಿವ ಶರೀರವನ್ನು ರಟ್ಟಿಹಳ್ಳಿಗೆ ತರಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮೃತದೇಹ ಮನೆಗೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಬಂಧು-ಬಳಗ ಮತ್ತು ಸ್ಥಳೀಯರು ಕಣ್ಣೀರಿನಲ್ಲಿ ಮುಳುಗಿದರು. ಕೊಲೆ ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಕುಟುಂಬ ಸದಸ್ಯರು ಪಟ್ಟು ಹಿಡಿದರು.
ಕುಟುಂಬಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ರಟ್ಟಿಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಯಿತು. ಬಳಿಕ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಹಾಗೂ ಉಳಿದ ಆರೋಪಿಯನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆಗೆ ಒಪ್ಪಿಗೆ ಸೂಚಿಸಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಯನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದರು.
ಪ್ರಾಥಮಿಕ ತನಿಖೆಯಲ್ಲಿ ಮೊಟ್ಟೆ ಖರೀದಿ ವೇಳೆ ಹಣದ ವಿಚಾರಕ್ಕೆ ಜಗಳ ಆರಂಭವಾಗಿ ನಂತರ ತಳ್ಳಾಟ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ. ತಳ್ಳಾಟದ ವೇಳೆ ಶಿವಾಜಿರಾವ್ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ಸಾಗಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.
ಇದೇ ವೇಳೆ ಪ್ರಕರಣದ ಬಗ್ಗೆ ಹರಿದಾಡುತ್ತಿರುವ ವಿವಿಧ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಎಸ್‌ಪಿ ಯಶೋದಾ ವಂಟಗೋಡಿ, ಪ್ರಸ್ತುತ ತನಿಖೆಯಲ್ಲಿ ಈ ಘಟನೆ ಕೋಮು ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ ಎಂಬುದು ದೃಢಪಟ್ಟಿಲ್ಲ. ಆರೋಪಿಗಳ ಕುಟುಂಬ ಮತ್ತು ಮೃತ ಶಿವಾಜಿರಾವ್ ಕುಟುಂಬ ಪರಸ್ಪರ ಪರಿಚಯಸ್ಥರಾಗಿದ್ದರು. ಮೃತರ ದೇಹದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಂಭೀರ ಗಾಯಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ. ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯೂ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದರು.
ಈ ನಡುವೆ ಮೃತ ಶಿವಾಜಿರಾವ್ ಅವರ ಪುತ್ರ ಭರತ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಮ್ಮ ತಂದೆ ಜಗಳ ಬಿಡಿಸಲು ಬಂದಿದ್ದರು. ಆದರೆ ನಾಲ್ವರು ಸೇರಿ ಅವರನ್ನು ನೆಲಕ್ಕೆ ಕೆಡವಿ ತುಳಿದರು. ನನ್ನ ಕಣ್ಣೆದುರೇ ತಂದೆ ಮೃತಪಟ್ಟರು. ಆರೋಪಿಗಳು ಮೊದಲಿನಿಂದಲೂ ನಮ್ಮ ವ್ಯಾಪಾರವನ್ನು ಸಹಿಸುತ್ತಿರಲಿಲ್ಲ. ಆಗಾಗ್ಗೆ ತೊಂದರೆ ಕೊಡುತ್ತಿದ್ದರು ಎಂದು ದೂರಿದ್ದಾರೆ.
ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಹಾಗೂ ವಿಧಿವಿಜ್ಞಾನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಟ್ಟಿಹಳ್ಳಿ ಪಟ್ಟಣದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದ್ದು, ಎರಡೂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡಲಾಗಿದೆ.
Laxmi News 24×7