ಹೊಸದಿಲ್ಲಿ: ಕಳೆದ 17 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಮುಖಿಯಾಗಿ ಏರುತ್ತಲೇ ಇವೆ. ಆದರೆ ಬುಧವಾರದ ಬೆಲೆಯೇರಿಕೆಯಲ್ಲಿ ಡೀಸೆಲ್ ದರ ಹೊಸ ಮೈಲಿಗಲ್ಲನ್ನೇ ಸ್ಥಾಪಿಸಿದೆ. ದಿಲ್ಲಿಯಲ್ಲಿ ಬುಧವಾರದ ಡೀಸೆಲ್ ದರವು ಪೆಟ್ರೋಲ್ ದರಕ್ಕಿಂತ ಹೆಚ್ಚಾಗಿದೆ. ಇದೇ ಮೊದಲ ಬಾರಿಗೆ ಪೆಟ್ರೋಲ್ ದರಕ್ಕಿಂತಲೂ ಡೀಸೆಲ್ ದರ ಹೆಚ್ಚಳವಾಗಿರುವುದಕ್ಕೆ ದಿಲ್ಲಿ ಜನತೆ ಸಾಕ್ಷಿಯಾಗಿದ್ದಾರೆ.
ಸತತ 17 ದಿನಗಳ ಏರಿಕೆ ಬಳಿಕ ಇಂದು ಪೆಟ್ರೋಲ್ ಬೆಲೆ ಯಥಾಸ್ಥಿತಿಯಿದ್ದು ಡಿಸೆಲ್ ಬೆಲೆಯಲ್ಲಿ 48 ಪೈಸೆ ಏರಿಕೆಯಾಗಿದೆ.
ದಿಲ್ಲಿಯಲ್ಲಿ ಬುಧವಾರ ಪೆಟ್ರೋಲ್ ದರ ₹79.76ರಷ್ಟು ಇದ್ದರೆ, ಡೀಸೆಲ್ ದರವು ₹79.88ರಷ್ಟಿತ್ತು. ಅಂದರೆ ಪರಟ್ರೋಲ್ ದರಕ್ಕಿಂತಲೂ ಡೀಸೆಲ್ ದರ 12 ಪೈಸೆಯಷ್ಟು ಹೆಚ್ಚಾಗಿದೆ. ಇದಲ್ಲಿ ತೈಲ ಕಂಪನಿಗಳು ಸತತ 17 ದಿನಗಳಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸುತ್ತಲೇ ಬರುತ್ತಿವೆ.
ಡೀಸೆಲ್ ದರವು ಪೆಟ್ರೋಲ್ ದರವನ್ನು ಹಿಂದಿಕ್ಕಿರುವುದು ದಿಲ್ಲಿಯಲ್ಲಿ ಮಾತ್ರವೇ. ಇತರೆ ರಾಜ್ಯಗಳಲ್ಲಿ ಪೆಟ್ರೋಲಿಗಿಂತ ಕಡಿಮೆ ದರದಲ್ಲೇ ಡೀಸೆಲ್ ಲಭ್ಯವಾಗುತ್ತಿದೆ. ಆದರೆ, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಅಂತರ ಸಣ್ಣದಾಗುತ್ತ ಬರುತ್ತಿದೆ.
ಸರಕಾರದ ದತ್ತಾಂಶಗಳ ಪ್ರಕಾರ 2012ರಲ್ಲಿ ದಿಲ್ಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಂತರ 30.25 ರೂಪಾಯಿಯಷ್ಟಿತ್ತು. ಅಂದರೆ, 2012ರ ಜೂನ್ 18ರಂದು ಪೆಟ್ರೋಲ್ ಬೆಲೆ 71.16 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 40.91 ರೂಪಾಯಿ ಇತ್ತು. ಮುಂಬೈನಲ್ಲಿ ಕೂಡ ಬೆಲೆಗಳ ಅಂತರ 31.17 ರೂಪಾಯಿಯಷ್ಟಿತ್ತು. 2012ರ ಜೂನ್ 28ರಂದು ಪೆಟ್ರೋಲ್ ಬೆಲೆ 76.45 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 45.28ರಷ್ಟುತ್ತು.
ಯಾವ ನಗರದಲ್ಲಿ ಎಷ್ಟು ದರ?:
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.82 ರೂ. ಇದ್ದರೆ, ಡೀಸೆಲ್ ದರ 76.015ರೂ. ನಿಗದಿಯಾಗಿದೆ. ಮುಂಬೈನಲ್ಲಿ ಪೆಟ್ರೋಲ್‍ಗೆ 86.54 ರೂ. ಹಾಗೂ ಡೀಸೆಲ್ ದರ 78.22 ರೂ. ಇದ್ದರೆ ಚೆನ್ನೈನಲ್ಲಿ ಪೆಟ್ರೋಲ್ 83.04 ರೂ. ಹಾಗೂ ಡೀಸೆಲ್ 77.17 ರೂ. ನಿಗದಿಯಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 81.45 ರೂ., ಡೀಸೆಲ್ ಬೆಲೆ 75.06 ರೂ. ಇದೆ.