Breaking News

ಕೇತನ್ ಹತ್ಯೆ ಬಳಿಕ ಲೋಹಗಡ ಕೋಟೆಗೆ ಮುಗಿಬಿದ್ದ ಜನ – ಕೊಲೆ ನಡೆದ ಸ್ಥಳಕ್ಕೆ ‘ಸಿಯಾ ಪಾಯಿಂಟ್’ ಹೆಸರು

Spread the love

ಮುಂಬೈ: ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಪ್ರಕರಣದ ಬಳಿಕ ಮಹಾರಾಷ್ಟ್ರದ  ಐತಿಹಾಸಿಕ ಲೋಹಗಡ ಕೋಟೆಗೆ ಪ್ರವಾಸಿಗರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಕೇತನ್ ಹತ್ಯೆ ನಡೆದ ಸ್ಥಳವನ್ನು ಇದೀಗ ಹಲವರು ‘ಸಿಯಾ ಪಾಯಿಂಟ್’ ಎಂದು ಕರೆಯುತ್ತಿದ್ದು, ಈ ವೈರಲ್ ಸ್ಥಳವನ್ನು ನೋಡಲು ಸಾಕಷ್ಟು ಜನ ಕೋಟೆಗೆ ಭೇಟಿ ನೀಡುತ್ತಿದ್ದಾರೆ.

ಜೂನ್ 18ರಂದು 26 ವರ್ಷದ ಕೇತನ್ ಅಗರ್ವಾಲ್ ಲೋಹಗಡ ಕೋಟೆಯಲ್ಲಿನ ಸುಮಾರು 350 ಅಡಿ ಎತ್ತರದ ಕಣಿವೆಗೆ ತಳ್ಳಲ್ಪಟ್ಟು ಮೃತಪಟ್ಟಿದ್ದರು. ಆರಂಭದಲ್ಲಿ ಇದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ನಂತರದ ತನಿಖೆಯಲ್ಲಿ, ಮದುವೆ ತಪ್ಪಿಸಿಕೊಳ್ಳಲು ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೊಲೆ ಆರೋಪ ಬೆಳಕಿಗೆ ಬಂದಿದೆ. ಪ್ರಕರಣ ಬಹಿರಂಗವಾದ ಬಳಿಕ ಲೋಹಗಡ ಕೋಟೆಗೆ ಬರುವ ಪ್ರವಾಸಿಗರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ವಿಶೇಷವಾಗಿ ಕೇತನ್‌ನನ್ನು ತಳ್ಳಿದ ಸ್ಥಳವನ್ನು ನೋಡಲು ಹಲವರು ಆಗಮಿಸುತ್ತಿದ್ದಾರೆ.

ಈ ಕುರಿತು ಲೋಹಗಡ–ವಿಸಾಪುರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಸಚಿನ್ ಟೆಕವಾಡೆ ಮಾತನಾಡಿ, ಕಳೆದ ಐದು ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ವಾರಾಂತ್ಯದಲ್ಲಿ ಸುಮಾರು 10 ಸಾವಿರ ಮಂದಿ ಕೋಟೆಗೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಜನಸಂದಣಿ ಕಡಿಮೆಯಾಗಿತ್ತು. ಈಗ ಹತ್ಯೆ ಪ್ರಕರಣವೇ ಜನರನ್ನು ಕೋಟೆಯತ್ತ ಸೆಳೆಯುತ್ತಿದೆ ಎಂದು ಹೇಳಿದ್ದಾರೆ.

ಕೋಟೆಯ ಸಿಬ್ಬಂದಿ ಹೇಳುವಂತೆ, ಅನೇಕ ಪ್ರವಾಸಿಗರು ನೇರವಾಗಿ ಕೊಲೆ ನಡೆದ ಸ್ಥಳದ ಬಗ್ಗೆ ವಿಚಾರಿಸುತ್ತಿದ್ದಾರೆ. ಕೆಲವರು ಆ ಸ್ಥಳವನ್ನು ‘ಸಿಯಾ ಪಾಯಿಂಟ್’ ಎಂದು ಕರೆಯಲೂ ಆರಂಭಿಸಿದ್ದಾರೆ.

ಸುಮಾರು 3,389 ಅಡಿ ಎತ್ತರದಲ್ಲಿರುವ ಲೋಹಗಡ ಕೋಟೆ ಮಹಾರಾಷ್ಟ್ರದ ಅತ್ಯಂತ ಪ್ರಮುಖ ಐತಿಹಾಸಿಕ ಕೋಟೆಗಳಲ್ಲಿ ಒಂದಾಗಿದೆ. ಸಾತವಾಹನರ ಕಾಲದಿಂದ ಆರಂಭವಾಗಿ, ಚಾಲುಕ್ಯರು, ಯಾದವರು, ಬಹಮನಿ, ಆದಿಲ್‌ಶಾಹಿ ಮತ್ತು ಬಳಿಕ ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿ ಈ ಕೋಟೆ ಮಹತ್ವದ ಸ್ಥಾನ ಪಡೆದಿತ್ತು. ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲೂ ಈ ಕೋಟೆಗೆ ಸ್ಥಾನವಿದೆ.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ