ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಮಾರಿ ತಾಂಡವಾಡುತ್ತಿದೆ. ಅಂತೆಯೇ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೂ ಕೊರೊನಾ ಸೋಂಕು ಹರಡಿದೆ.
ಇಂದು ಬೆಂಗಳೂರಿನಲ್ಲಿ ಕೊರೊನಾಗೆ ನಾಲ್ವರು ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ಮಂದಿ ಇಂದು ಮೃತಪಟ್ಟಿದ್ದಾರೆ. ಆದರೆ ಸೋಮವಾರ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಕೋವಿಡ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಆಂತಕಕ್ಕೆ ಎಡೆಮಾಡಿಕೊಟ್ಟಿದೆ.
ಸೋಮವಾರ ನಾಗರಬಾವಿ ಬ್ರಿಡ್ಜ್ ನಿಂದ ಬಿದ್ದು ಅಪರಿಚಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವನ್ನಪ್ಪಿದ ವ್ಯಕ್ತಿಯನ್ನು ಬೀದಿ ಬದಿಯ ಭಿಕ್ಷುಕ ಎಂದು ಗುರುತಿಸಲಾಗಿತ್ತು. ಆದರೆ ಆತನ ಹೆಸರು ಮನೆ ವಿಳಾಸ ಹಿನ್ನೆಲೆ ಯಾವುದೂ ಪತ್ತೆಯಾಗಿರಲಿಲ್ಲ. ಆದ್ದರಿಂದ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಸೇರಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದರು. ಈಗ ಮೃತ ಭಿಕ್ಷುಕನ ಮರಣ ನಂತರ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, ಹೆಣ ಸಾಗಿಸಿದ ಅಧಿಕಾರಿಗಳಿಗೆ ಟೆನ್ಷನ್ ಶುರುವಾಗಿದೆ.