Breaking News

ಜಡ್ಜ್‌ ನೇಮಕಾತಿಗೂ ಮುನ್ನವೇ ಚಂದ್ರಚೂಡ್ ಸರ್ಕಾರದ ಪೂರ್ವಾನುಮೋದನೆ ಪಡೆಯುತ್ತಿದ್ದರು: ನಿವೃತ್ತ ನ್ಯಾ. ಸಂಜಯ್ ಕಿಶನ್ ಕೌಲ್

Spread the love

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ನ) ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರು ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರ ಕಾರ್ಯವೈಖರಿ ಕುರಿತು ಅತ್ಯಂತ ಸಂಚಲನಕಾರಿ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲಿ ನ್ಯಾಯಾಧೀಶರ ಹೆಸರುಗಳನ್ನು ಔಪಚಾರಿಕವಾಗಿ ಚರ್ಚಿಸುವ ಮುನ್ನವೇ ನ್ಯಾ. ಚಂದ್ರಚೂಡ್ ಅವರು ಸರ್ಕಾರದೊಂದಿಗೆ ಆ ಹೆಸರುಗಳ ಬಗ್ಗೆ ಚರ್ಚಿಸುತ್ತಿದ್ದರು ಇದು ಸರ್ಕಾರದ ‘ಪೂರ್ವಾನುಮೋದನೆ’  ಪಡೆಯುವಂತಿದ್ದು, ತಾವು ಇದನ್ನು ಕಟುವಾಗಿ ವಿರೋಧಿಸಿದ್ದಾಗಿ ನ್ಯಾ. ಕೌಲ್ ತಿಳಿಸಿದ್ದಾರೆ.

ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನ್ಯಾ. ಕೌಲ್, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತಮ್ಮ ಆತ್ಮಚರಿತ್ರೆ ವಿದೌಟ್ ಫಿಯರ್ ಆರ್ ಫೇವರ್ ನಲ್ಲಿ ಉಲ್ಲೇಖಿಸಿರುವ ಘಟನೆಗಳನ್ನು ಹಂಚಿಕೊಂಡಿದ್ದಾರೆ.

ಒಮ್ಮೆ ಕೊಲಿಜಿಯಂ ಸಭೆ ನಡೆಯುತ್ತಿದ್ದ ವೇಳೆ ಸಿಜೆಐ ಚಂದ್ರಚೂಡ್ ಅವರು ನನ್ನನ್ನು ಪ್ರತ್ಯೇಕವಾಗಿ ಪಕ್ಕಕ್ಕೆ ಕರೆದೊಯ್ದು, ಪ್ರಸ್ತಾಪಿತ ಹೆಸರುಗಳ ಕುರಿತು ಸರ್ಕಾರದ ಅಭಿಪ್ರಾಯ ತಿಳಿಯಲು ಫೋನ್ ಕರೆ ಮಾಡಲೇ ಎಂದು ಕೇಳಿದ್ದರು. ಕೊಲಿಜಿಯಂನಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಇಂತಹ ಹೆಜ್ಜೆ ಇಡುವುದು ಸರಿಯಲ್ಲ ಎಂದು ನಾನು ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ ಎಂದು ಕೌಲ್ ನೆನಪಿಸಿಕೊಂಡಿದ್ದಾರೆ.

“ಆ ಸಭೆಯಲ್ಲಿ ಕೊಲಿಜಿಯಂ ಐದು ಹೆಸರುಗಳಿಗೆ ಒಪ್ಪಿಗೆ ನೀಡಿತ್ತು. ಆದರೆ ನ್ಯಾ. ಚಂದ್ರಚೂಡ್ ಕೊನೆ ಕ್ಷಣದಲ್ಲಿ ಆರನೇ ಹೆಸರೊಂದನ್ನು ತಂದು ಅದಕ್ಕೂ ಅನುಮೋದನೆ ಬಯಸಿದರು. ಆದರೆ ನಾನಾಗಲಿ ಅಥವಾ ಕೊಲಿಜಿಯಂನ ಇತರ ಸದಸ್ಯರಾಗಲಿ ಅದಕ್ಕೆ ಒಪ್ಪಲಿಲ್ಲ. ಆ ಆರನೇ ಹೆಸರು ಸೇರಿದಂತೆ ಉಳಿದ ಹೆಸರುಗಳ ಬಗ್ಗೆ ಅವರು ಈಗಾಗಲೇ ಸರ್ಕಾರದೊಂದಿಗೆ ಒಂದು ರೀತಿಯ ಒಪ್ಪಿಗೆ ಅಥವಾ ಪೂರ್ವಾನುಮೋದನೆ ಪಡೆದುಕೊಂಡಿದ್ದರೇನೋ ಎಂಬ ಸಂಶಯ ನನಗಿತ್ತು” ಎಂದು ಕೌಲ್ ಹೇಳಿದ್ದಾರೆ.

ಕೊಲಿಜಿಯಂ ತೀರ್ಮಾನ ಕೈಗೊಂಡ ನಂತರ ಸರ್ಕಾರದ ಜೊತೆ ಸಮಾಲೋಚನೆ ನಡೆಸುವುದಕ್ಕೂ, ಕೊಲಿಜಿಯಂ ನಿರ್ಧರಿಸುವ ಮುನ್ನವೇ ಸರ್ಕಾರದ ಅನುಮೋದನೆ ಕೋರುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಮುಂಚಿತವಾಗಿಯೇ ಸರ್ಕಾರದ ಒಪ್ಪಿಗೆ ಪಡೆಯುವುದು ತಪ್ಪು ಸಂದೇಶ ರವಾನಿಸುತ್ತದೆ. ಹೆಸರುಗಳನ್ನು ಮುಂಚಿತವಾಗಿ ಚರ್ಚಿಸುವ ಈ ಪದ್ಧತಿ ನ್ಯಾ. ಚಂದ್ರಚೂಡ್ ಅವರಿಗಿಂತ ಹಿಂದೆಯೂ ಇತ್ತು, ಮುಂದೆಯೂ ಮುಂದುವರಿಯುತ್ತಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾ. ಚಂದ್ರಚೂಡ್ ದುರ್ಬಲ ಮುಖ್ಯ ನ್ಯಾಯಮೂರ್ತಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನ್ಯಾ. ಚಂದ್ರಚೂಡ್ ಅವರಿಗೆ ಅಪಾರ ಜ್ಞಾನ, ಬೌದ್ಧಿಕ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದ ಗುಣವಿತ್ತು. ಅವರ ನ್ಯಾಯಾಂಗ ತೀರ್ಪುಗಳ ಬಗ್ಗೆ ನನಗೆ ತಕರಾರಿಲ್ಲ. ಆದರೆ ಆಡಳಿತಾತ್ಮಕ ವಿಚಾರಗಳಲ್ಲಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಅವರು ಸರ್ಕಾರಕ್ಕೆ ಅಗತ್ಯಕ್ಕಿಂತ ಹೆಚ್ಚಾಗಿ ತಲೆಬಾಗುತ್ತಿದ್ದರು. ಪ್ರತಿಯೊಂದನ್ನೂ ಮುಂಚಿತವಾಗಿ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದುದು ವ್ಯವಸ್ಥೆಗೆ ಧಕ್ಕೆ ತಂದಿತು” ಎಂದು ಅಭಿಪ್ರಾಯಪಟ್ಟರು.

ಇದಲ್ಲದೆ, ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಪ್ರಕರಣವನ್ನು ಸಿಜೆಐ ಚಂದ್ರಚೂಡ್ ಅವರು ತಮ್ಮ ಪೀಠದಿಂದ ಬೇರೆಡೆಗೆ ವರ್ಗಾಯಿಸಿದ್ದರು ಹಾಗೂ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ  ಮರುಪರಿಶೀಲನಾ ಅರ್ಜಿಯ ವಿಚಾರಣೆಯಲ್ಲಿ ಮಧ್ಯಮ ಮಾರ್ಗ ಅನುಸರಿಸುವಂತೆ ತಮಗೆ ಸಲಹೆ ನೀಡಿದ್ದರು ಎಂದೂ ನ್ಯಾ. ಕೌಲ್ ಇದೇ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

2017 ರಲ್ಲಿ ಸುಪ್ರೀಂ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಕೌಲ್‌ 2022ರಿಂದ ಜೂನ್‌ನಿಂದ ಕೊಲಿಜಿಯಂನಲ್ಲಿ ಕಾರ್ಯನಿರ್ವಹಿಸಿದ್ದರು. 2023ರ ಡಿಸೆಂಬರ್‌ನಲ್ಲಿ ನಿವೃತ್ತರಾಗಿದ್ದರು.


Spread the love

About Laxminews 24x7

Check Also

ಶಿವಮೊಗ್ಗ ದಸರಾದಲ್ಲಿ ಅಂಬಾರಿ ಆನೆ ರಂಪಾಟ – ಅಧಿಕಾರಿಗಳಿಗೆ ಕ್ಲೀನ್‌ಚಿಟ್

Spread the loveಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ  ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ರಂಪಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕ್ಲೀನ್‌ಚಿಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ