Breaking News

ರಾಮದೇವ್ ಹೋಟೆಲ್ ಬಳಿ ಕ್ಷಣಾರ್ಧದಲ್ಲೆ ಸುಟ್ಟು ಕರಕಲಾದ ಕಾರ್

Spread the love

ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಮದೇವ್ ಹೋಟೆಲ್ ರಸ್ತೆ ಮೇಲೆ ಚಲಿಸುತ್ತಿದ್ದ ಕಾರ್ ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೆ ಕಾರು ಸುಟ್ಟು ಕರಕಲಾಗಿದೆ.‌

ನಗರದ ರಾಮದೇವ್ ಹೋಟೆಲ್ ಎದುರಿನ ಡಿ-ಮಾರ್ಟ್ ಕಾರ್ನರ್ ಕಡೆಗೆ ಹೋಗುವ ರಸ್ತೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಕೇವಲ 10 ರಿಂದ 15 ನಿಮಿಷಗಳಲ್ಲೇ ಇಡೀ ಸ್ವಿಫ್ಟ್ ಕಾರು ಧಗಧಗನೆ ಹೊತ್ತಿ ಉರಿದು ಭಸ್ಮವಾಗಿದೆ.

ಕಾರು ರಸ್ತೆಯಲ್ಲಿ ಚಲಿಸುತ್ತಿದ್ದಾಗಲೇ ಎಂಜಿನ್ ಭಾಗದಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದರೆ, ಕಾರಿನ ಒಳಗಿನಿಂದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ತಕ್ಷಣವೇ ಗಮನಿಸಿದ ಚಾಲಕ ಹಾಗೂ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದಿದ್ದಾರೆ.

ತಕ್ಷಣವೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಎಲ್ಲರೂ ಕೆಳಗಿಳಿದು ಓಡಿ ಹೋಗಿದ್ದರಿಂದ ಒಂದು ದೊಡ್ಡ ದುರಂತ ತಪ್ಪಿದಂತಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಹಾಗೂ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಆಹುತಿಯಾಗಿರುವ ಈ ಸ್ವಿಫ್ಟ್ ಕಾರು ಬೆಳಗಾವಿ ಪಾಸಿಂಗ್ ನೋಂದಣಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್ ಕಾರಣದಿಂದಾಗಿ ಈ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಅಸಲಿ ಕಾರಣ ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ.

ರಸ್ತೆ ಮಧ್ಯೆಯೇ ಕಾರು ಭೀಕರವಾಗಿ ಹೊತ್ತಿ ಉರಿಯುತ್ತಿದ್ದನ್ನು ಕಂಡು ಸ್ಥಳದಲ್ಲಿ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದಾಗಿ ಕೆಲಕಾಲ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.‌


Spread the love

About Laxminews 24x7

Check Also

ವಿಧಾನ ಪರಿಷತ್‌ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ

Spread the love ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಇಂದು ಸಲೀಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ