ಮನೆ ಬಾಡಿಗೆ ಕಟ್ಟಲು ಸಹ ಹಣವಿಲ್ಲದೆ 3 ವರ್ಷದ ಹೆಣ್ಣು ಮಗುವನ್ನ 11,000 ರುಪಾಯಿಗೆ ಷರತ್ತುಬದ್ದ ಮಾರಾಟ ಮಾಡಲಾಗಿತ್ತು. ಷರತ್ತಿನ ಪ್ರಕಾರ ಮಗುವನ್ನ ತಾಯಿಗೆ ನೋಡಲು ಬಿಡದಿದ್ದಕ್ಕೆ ಠಾಣೆ ಮೆಟ್ಟಿಲೇರಿದ ನೊಂದ ಮಾತೃ ಹೃದಯ.. ಮುಂದೆ ಓದಿ.
ನೆಲಮಂಗಲ: ಕೊರೋನಾ ಎಂಬ ಮಹಾಮಾರಿ ಜನರ ಆರ್ಥಿಕ ಪರಿಸ್ಥಿತಿಯನ್ನ ನೆಲ ಕಚ್ಚಿಸಿದ್ದು, ಲಕ್ಷಾಂತರ ಜನ ಬೆಂಗಳೂರಿನಲ್ಲಿ ಮನೆ ಬಾಡಿಗೆ ಸಹ ಕಟ್ಟಲಾಗದೆ ಬೆಂಗಳೂರು ತೊರೆದು ಹಳ್ಳಿಗಳ್ಳತ್ತ ಗಂಟು ಮೂಟೆ ಕಟ್ಟಿಕೊಂಡು ಹೊರಟೇ ಹೋದ್ರು.
ಕೆಲಸ ಕಾರ್ಯವಿಲ್ಲದೆ ಬಳಗವಿಲ್ಲದೆ ತುತ್ತು ಅನ್ನಕ್ಕಾಗಿ ಜನರು ಪರದಾಡುವ ಪರಿಸ್ಥಿರಿ ಎದುರಾಗಿದ್ದು ಮುಂದಿನ ಜೀವನ ಹೇಗಪ್ಪ ಅನ್ನೋ ಭಾರಿ ದೊಡ್ಡ ಪ್ರಶ್ನೆ ಎದುರಾಗಿದೆ. ಕೊರೋನಾ ಸಂಕಷ್ಟದಲ್ಲಿ ಮನೆಯ ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯಲ್ಲಿ ಹೆತ್ತ ಮಗಳನ್ನೇ ಮಾರಿದ ಕರುಣಾ ಜನಕ ಕಥೆಯೊಂದು ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ರೇಣುಕಾನಗರದ ನಿವಾಸಿ ನಾಗಲಕ್ಷ್ಮಮ್ಮರಿಗೆ 1 ಗಂಡು ಹಾಗೂ ಎರಡು ಹೆಣ್ಣುಮಕ್ಕಳಿದ್ದರು. ಮನೆಯಲ್ಲಿ ಕಿತ್ತು ತಿನ್ನೋ ಬಡತನ ಇತ್ತು ಈ ವೇಳೆ ಗಂಡ ಶಂಕರ್ ಕುಟುಂಬವನ್ನ ತೊರೆದು ಹೊರಟು ಹೋದ. ಕುಟುಂಬದ ಸಂಪೂರ್ಣ ಜವಾಬ್ದಾರಿ ನಾಗಲಕ್ಷ್ಮಿ ಹೆಗಲಿಗೆ ಬಿದ್ದ ಕಾರಣ ಈಕೆ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.
ಗಂಡ ತೊರೆದ ಬೆನ್ನಲ್ಲೇ ಗಂಡು ಮಗುವೊಂದು 10 ತಿಂಗಳ ಹಿಂದೆ ಮೃತಪಟ್ಟಿತ್ತು. ಮತ್ತೊಂದು ಮಗುವನ್ನ ನಾಗಲಕ್ಷ್ಮಿ ಸಂಕೇಶ್ವರದ ತನ್ನ ತಾಯಿ ಮನೆಗೆ ಕಳುಹಿಸಿದ್ದರು. ಈ ನಡುವೆ ಲಾಕ್‌ಡೌನ್ ಆದಾಗಿನಿಂದ ಹೋಟೆಲ್‌ನಲ್ಲೂ ಕೆಲಸವಿಲ್ಲದೆ ಮನೆಯ ಬಾಡಿಗೆ ಸಹ ಕಟ್ಟಲಾಗದೆ ಕಂಗೆಟ್ಟುಹೋಗಿದ್ದರು.
ಈ ವೇಳೆ ನಾಗಲಕ್ಷ್ಮಿ ಮನೆಯ ಪಕ್ಕದಲ್ಲಿದ್ದ ಸಂಗೀತಾ 3 ವರ್ಷದ ಹೆಣ್ಣು ಮಗುವನ್ನ ಮಾರಿ ಬಿಡು ಎಂದು ಪ್ರಚೋದನೆ ಮಾಡಿದ್ದಾರೆ. ಒಲ್ಲೆ ಎಂದ ನಾಗಲಕ್ಷ್ಮಿಗೆ ಮನವೊಲಿಸಿ ತುಮಕೂರು ಮೂಲದ ಕೃಷ್ಣಮೂರ್ತಿ ಎನ್ನುವವರಿಗೆ 11,000 ರುಪಾಯಿಗೆ ಮಾರಾಟ ಮಾಡಿದ್ದಾರೆ.
ಆದ್ರೆ.. ತಾನು ಕೇಳಿದಾಗ ಮಗುವನ್ನ ತೋರಿಸಬೇಕು ಎಂದು 50 ರೂಪಾಯಿ ಬಾಂಡ್ ಪೇಪರ್‌ನಲ್ಲಿ ಅಗ್ರಿಮೆಂಟ್ ಮಾಡಿಕೊಂಡು ದತ್ತು ಪಡೆದ ರೀತಿಯಲ್ಲಿ ಆಗಸ್ಟ್ 11ರಂದು ಮಗುವನ್ನ ಮಾರಾಟ ಮಾಡಲಾಗಿದೆ. ನನ್ನ ಮಗುವನ್ನು ತೋರಿಸಿ ಎಂದು ಪೋನ್ ಮಾಡಿದಾಗ ದತ್ತು ಪಡೆದ ಕೃಷ್ಣಮೂರ್ತಿ ಫೋನ್ ಸ್ವೀಕರಿಸದ ಹಿನ್ನೆಲೆ ಮಗುವನ್ನ ಕಳೆದುಕೊಂಡ ಮಾತೃ ಹೃದಯ ಹಂಬಲಿಸುತ್ತಾ ನೆಲಮಂಗಲ ಟೌನ್ ಠಾಣೆ ಮೆಟ್ಟಿಲೇರಿದರು.
ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ವೃತ್ತ ನಿರೀಕ್ಷಕರಾದ ಶಿವಣ್ಣ ಮಗು ದತ್ತು ಪಡೆದ ಕೃಷ್ಣಮೂರ್ತಿಯನ್ನ ಠಾಣೆಗೆ ಕರೆಸಿ, 3 ವರ್ಷದ ಹೆಣ್ಣು ಮಗುವನ್ನ ತಾಯಿ ಮಡಿಲು ಸೇರಿಸಿದರು. ಮಗುವನ್ನ ನೋಡಿದ ತಾಯಿ ಕಣ್ಣೀರಿಡುತ್ತಾ.. ಬಿಗಿದಪ್ಪಿ ಪೊಲೀಸರಿಗೆ ಧನ್ಯವಾದ ತಿಳಿಸಿದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??