ಬೆಂಗಳೂರು: ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ತಳ್ಳಿ ಹಾಕಿರುವ ಹೈಕೊರ್ಟ್, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ನಿರ್ದೇಶನ ಕೋರಿ ವಕೀಲ ಲೋಕೇಶ್ ಎಂಬುವವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಅರ್ಜಿ ಇತ್ಯರ್ಥ ಮಾಡಿದೆ.
ಸರ್ಕಾರದಿಂದ ಪರೀಕ್ಷೆ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ ಹೈಕೋರ್ಟ್ ಮಾಹಿತಿ ಕೇಳಿತ್ತು. ಅದರಂತೆ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾರ್ಗಸೂಚಿಗಳನ್ನು ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ ಹೈಕೋರ್ಟ್, ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸಬೇಕು. ಯಾವುದೇ ವಿದ್ಯಾರ್ಥಿಗೆ ಇದರಿಂದ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿತು.
ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಂತೆ ಕೋರಿ ಪಿಐಎಲ್ ಸಲ್ಲಿಸಲು ಇನ್ನೂ ಕೆಲವರು ನಿರ್ಧರಿಸಿದ್ದಾರೆ. ಆದರೆ ಹೈಕೋರ್ಟ್ ಮತ್ತೆ ಮತ್ತೆ ಪಿಐಎಲ್ ಸ್ವೀಕರಿಸುತ್ತದೆಯೋ ಅಥವಾ ನೇರವಾಗಿ ತಿರಸ್ಕರಿಸುತ್ತದೆಯೋ ಕಾದು ನೋಡಬೇಕಿದೆ.
ಸಧ್ಯಕ್ಕಂತೂ ಸರಕಾರದ ನಿರ್ಧಾರಕ್ಕೆ ಮನ್ನಡೆ ಸಿಕ್ಕಿದೆ