ಹೈದರಾಬಾದ್: ಕೊರೊನಾ ಲಾಕ್‍ಡೌನ್‍ನಿಂದ ಮದುವೆಯನ್ನು ಮುಂದೂಡಿದ್ದರಿಂದ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಪೆಂಡೂರ್ ಗಣೇಶ್ (22) ಮತ್ತು ಸೋಯಂ ಸೀತಾಬಾಯಿ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶುಕ್ರವಾರ ನಾರ್ನೂರ್ ಮಂಡಲದ ಕಣ್ಣಾಪುರ ಗ್ರಾಮದ ಕೃಷಿ ತೋಟದಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ರೈತ ಗಣೇಶ್ ಮತ್ತು ಅದೇ ಗ್ರಾಮದ ಸೀತಾಬಾಯಿ ಇಬ್ಬರು ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯನ್ನು ಮನೆಯಲ್ಲಿ ತಿಳಿಸಿದ್ದಾರೆ. ನಂತರ ಎರಡು ಕುಟುಂಬದವರು ಕೂಡ ಇವರ ಮದುವೆಗೆ ಸಮ್ಮತಿಸಿದ್ದರು. ಅದರಂತೆಯೇ ಕೆಲವು ತಿಂಗಳ ಹಿಂದೆ ಗಣೇಶ್ ಮತ್ತು ಸೀತಾಬಾಯಿ ಇಬ್ಬರ ನಿಶ್ಚಿತಾರ್ಥವು ನಡೆದಿದೆ.
ಏಪ್ರಿಲ್‍ನಲ್ಲಿ ಇವರ ಮದುವೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ಎರಡು ಕುಟುಂಬದವರು ಮದುವೆಯನ್ನು ಮುಂದೂಡಲು ನಿರ್ಧರಿಸಿದ್ದರು. ಇದರಿಂದ ಪ್ರೇಮಿಗಳು ಬೇಸರಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಇತ್ತೀಚೆಗೆ ಮತ್ತೆ ಲಾಕ್‍ಡೌನ್ ವಿಸ್ತರಣೆಯಾಗಿದೆ. ಇದರಿಂದ ಮದುವೆಯ ಬಗ್ಗೆ ಅನೇಕ ಕನಸು ಕಂಡಿದ್ದ ಪ್ರೇಮಿಗಳು ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು. ವಿವಾಹವನ್ನು ಮುಂದೂಡಿದ್ದರಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ.
ಇಬ್ಬರ ಮೃತದೇಹಗಳು ಹೊಲದಲ್ಲಿ ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಉಟ್ನೂರ್ ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದೇವೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಸಬ್ ಇನ್ಸ್‌ಪೆಕ್ಟರ್ ಎಂ.ವಿಜಯ್ ಹೇಳಿದ್ದಾರೆ.