Breaking News

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ

Spread the love

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ  ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಪಕ್ಷದ ಎಲ್ಲಾ 63 ಶಾಸಕರಿಂದಲೂ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿರುವ ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಆಣೆ-ಪ್ರಮಾಣ ಮಾಡಿಸಲು ಕಮಲ ಪಾಳಯ ನಿರ್ಧರಿಸಿದೆ.

ಈ ಹೈಡ್ರಾಮಾಕ್ಕೆ ವೇದಿಕೆಯಾಗಲಿರುವುದು ಇದೇ ವಾರ ಧರ್ಮಸ್ಥಳದಲ್ಲಿ ಆಯೋಜನೆಯಾಗಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ. ಇದೇ ಗುರುವಾರ ಅಥವಾ ಶುಕ್ರವಾರದಂದು ಧರ್ಮಸ್ಥಳದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಭೆಯ ನಂತರ ಎಲ್ಲ 63 ಶಾಸಕರಿಂದಲೂ “ನಾವು ಅಡ್ಡ ಮತದಾನ ಮಾಡಿಲ್ಲ” ಎಂದು ಮಂಜುನಾಥನ ಸನ್ನಿಧಿಯಲ್ಲಿ ಪ್ರಮಾಣ ಮಾಡಿಸಲಾಗುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್  ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಭೆಗೆ ಯಾರೊಬ್ಬರೂ ಗೈರಾಗದಂತೆ ತಡೆಯಲು ಎಲ್ಲ ಶಾಸಕರಿಗೂ ಅಧಿಕೃತ ‘ವಿಪ್’  ಜಾರಿ ಮಾಡಲು ನಿರ್ಧರಿಸಲಾಗಿದೆ. ಆರ್. ಅಶೋಕ್ ಅವರು ಎಲ್ಲ ಶಾಸಕರಿಗೂ ವಿಪ್ ಕೊಡಿಸುವ ಮೂಲಕ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಲಿದ್ದಾರೆ.

ಧರ್ಮಸ್ಥಳದ ಆಣೆ-ಪ್ರಮಾಣದ ಪ್ರಕ್ರಿಯೆಗೆ ಚಾಲನೆ ನೀಡುವ ಮುನ್ನ ಬಿ.ವೈ. ವಿಜಯೇಂದ್ರ ಮತ್ತು ಆರ್. ಅಶೋಕ್ ಅವರು ಸೋಮವಾರ ಸಂಜೆ ಇಬ್ಬರೂ ಜಂಟಿಯಾಗಿ ದೆಹಲಿಗೆ ಪ್ರಯಾಣ ಬೆಳೆಸಿ ಹೈಕಮಾಂಡ್‌ ನಾಯಕರಿಗೆ ವರದಿ ಸಲ್ಲಿಸಲಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲಿರುವ ಈ ಜೋಡಿ, ರಾಜ್ಯದಲ್ಲಿ ನಡೆದ ಅಡ್ಡ ಮತದಾನದ ಬೆಳವಣಿಗೆಗಳು, ಅದಕ್ಕೆ ಕಾರಣರಾದ ಶಂಕಿತರು ಮತ್ತು ಅದರ ಹಿಂದಿರುವ ರಾಜಕೀಯ ಕೈವಾಡಗಳ ಬಗ್ಗೆ ಸಂಪೂರ್ಣ ಲಿಖಿತ ಹಾಗೂ ಮೌಖಿಕ ವಿವರಣೆಯನ್ನು ಹೈಕಮಾಂಡ್‌ಗೆ ನೀಡಲಿದ್ದಾರೆ. ತದನಂತರ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಧರ್ಮಸ್ಥಳದಲ್ಲಿ ಶಾಸಕರ ಆಣೆ-ಪ್ರಮಾಣ ಪ್ರಹಸನ ಶುರುವಾಗಲಿದೆ.

Spread the love

About Laxminews 24x7

Check Also

ಜೂನ್ 20-21ಕ್ಕೆ ಮತ್ತೆ 6 ಜಿಲ್ಲೆಗಳಿಗೆ ಮುಂಗಾರು ಚುರುಕು – ಯೆಲ್ಲೋ ಅಲರ್ಟ್

Spread the loveಜೂನ್ 20 ಹಾಗೂ 21 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿಗೆ ಭಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ