ಬೆಳಗಾವಿ :ಕೊರೋನಾ ವೈರಸ್ ಮಾಹಾಮಾರಿಯಿಂದ ಇಡೀ ದೇಶವನ್ನು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಲಾಕ್ ಡೌನ್ ನಿಂದ ಬಹುತೇಕ ಎಲ್ಲಾ ಉದ್ಯಮಗಳ ಮೇಲೆ ಎಫೆಕ್ಟ್ ತಟ್ಟಿದೆ. ಅತಿ ಹೆಚ್ಚು ಬೆಳಗಾವಿಯ ನೇಕಾರರಿಗೆ ಇದರಿಂದ ತೊಂದರೆಯಾಗಿದ್ದು, ಇನ್ನಿಲ್ಲದ ಸಂಕಷ್ಟ ಎದುರಾಗಿದೆ. ಕಷ್ಟದಲ್ಲಿ ಇರುವ ನೇಕಾರರಿಗೆ ನೆರವಾಗಲು ಎಲ್ಲಾ ಶಾಸಕರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರ ಶಾಸಕ ಅಭಯ ಪಾಟೀಲ್ ಪತ್ರ ಬರೆದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೇಕಾರಿಕೆ ನಂಬಿಕೊಂಡು ಜೀವನ ನಡೆಸುತ್ತಿವೆ. ಲಾಕ್ ಡೌನ್ ನಿಂದ ನೇಕಾರಿಗೆ ಉದ್ಯಮದ ತೀವ್ರವಾಗಿ ತತ್ತರಿಸಿದೆ. ಪ್ರಮುಖವಾಗಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಮದುವೆಗಳು ನಡೆಯುತ್ತವೆ.
ಈ ತಿಂಗಳಲ್ಲಿ ಲಾಕ್ ಡೌನ್ ನಿಂದ ಸೀರೆಗಳ ವ್ಯಾಪಾರವಾಗದೇ ಉಳಿದುಕೊಂಡಿವೆ. ಮುಂಬೈ ಹಾಗೂ ಸೂರತ್ ನಿಂದ ಕಚ್ಚಾ ವಸ್ತಗಳ ಪೂರೈಕೆಯಾಗಿಲ್ಲ. ಹೀಗಾಗಿ ನೇಕಾರ ಕುಟುಂಬಗಳಿಗೆ ತೀವ್ರ ನಷ್ಟ ಅನುಭವಿಸುತ್ತಿವೆ. ನೇಕಾರರ ಕೂಲಿ ಕಾರ್ಮಿಕರು ಬದುಕು ನಡೆಸುವುದು ಇನ್ನೂ ಕಷ್ಟಕರವಾಗಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ನೇಕಾರರ ಕುಟುಂಬಗಳು ಇವೆ. ಸ್ಥಳೀಯ ಶಾಸಕ ಅಭಯ ಪಾಟೀಲ್ ಈಗಾಗಲೇ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಿದ್ದಾರೆ. ಆದರೇ ತೀವ್ರ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಕೇವಲ ಆಹಾರ್ ಕಿಟ್ ಪೂರೈಕೆ ಸಾಕಾಗುತ್ತಿಲ್ಲ.
ರಾಜ್ಯ ಸರ್ಕಾರ ಕೈಮಗ್ಗ ಹೊಂದಿರುವ ನೇಕಾರರಿಗೆ ನೇಕಾರ ಸನ್ಮಾನ ಯೋಜನೆಗೆ 2 ಸಾವಿರ ಹಣ ನೀಡುವ ಭರವಸೆ ನೀಡಿದೆ. ನೇಕಾರರ ಕೂಲಿ ಕಾರ್ಮಿಕರಿಗೆ ಯಾವುದೇ ಸಹಾಯ ಧನ ಘೋಷಣೆ ಮಾಡಿಲ್ಲ. ಹೀಗಾಗಿ ರಾಜ್ಯದ 224 ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದು ನೇಕಾರರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ವಾರಿಯರ್ಸ್ ಸನ್ಮಾನ ಸಮಾರಂಭಗಳು ನಡೆಯುತ್ತಿವೆ. ಈ ಸಮಾರಂಭಕ್ಕೆ ನೇಕಾರರ ಬಳಿ ಸೀರೆಗಳನ್ನು ಬಳಸಿಕೊಳ್ಳುವಂತೆ ಪತ್ರ ಬರೆದಿದ್ದಾರೆ. ಈ ಮೂಲಕ ನೇಕಾರರಿಗೆ ನೆರವಾಗಲು ಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಶಾಸಕರಿಗೆ ಬರೆದಿರುವ ಪತ್ರದಲ್ಲಿ ನೇಕಾರರ ಬಳಿ ಖರಿದೀಸಿದರೆ ಸೀರೆ ಬೆಲೆ ಹಾಗೂ ವ್ಯಾಪರಸ್ಥರ ಬಳಿ ಖರಿದೀಸಿದರೆ ಆಗುವ ಹಣದ ವ್ಯತ್ಯಾಸ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ. ಈಗಾಗಲೇ ಅನೇಕರು ಶಾಸಕರು ಅಭಯ ಪಾಟೀಲ್ ಸಂಪರ್ಕಿಸುತ್ತಿದ್ದಾರೆ. ಈ ಮೂಲಕ ನೇಕಾರರಿಗೆ ಸ್ವಲ್ಪವಾದರೂ ನೆರವಾಬಹುದು ಎಂಬುದು ಅಭಯ ಪಾಟೀಲ್ ಅಭಿಪ್ರಾಯ.
ನೇಕಾರರ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಲ್ಲ. ಇವರನ್ನು ಕಾರ್ಮಿಕ ಇಲಾಖೆ ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿಲ್ಲ. ಹೀಗಾಗಿ ನೇಕಾರರು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಸಹ ಅಭಯ ಪಾಟೀಲ್ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಇರುವ ನೇಕಾರರು ಸೀರೆ ಬ್ಯಾಂಕ್ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಸರ್ಕಾರದಿಂದ ಯಾವುದೇ ಸೂಕ್ತ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಜವಳಿ ಸಚಿವರ ಶ್ರೀಮಂತ ಪಾಟೀಲ್ ಬೆಳಗಾವಿ ಜಿಲ್ಲೆಯವರೆ ಆಗಿದ್ದು ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ನೇಕಾರರ ಆಗ್ರಹವಾಗಿದೆ.