Breaking News
Home / ಜಿಲ್ಲೆ / ಮೂಡಲಗಿಯಲ್ಲಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಛೇರಿಯನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಛೇರಿಯನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

Spread the love

 

 

ಮೂಡಲಗಿ : ಮೂಡಲಗಿ ತಾಲೂಕಿಗೆ ಅಗತ್ಯವಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಮಾರ್ಚ ತಿಂಗಳೊಳಗೆ ಪ್ರಾರಂಭಗೊಳ್ಳಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಶುಕ್ರವಾರದಂದು ಹೆಸ್ಕಾಂನಿಂದ ನೂತನವಾಗಿ ಆರಂಭಗೊಂಡಿರುವ ಕಾರ್ಯ ಮತ್ತು ಪಾಲನಾ ಉಪವಿಭಾಗದ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪನೋಂದಣಾಧಿಕಾರಿಗಳ ಕಛೇರಿ ಪ್ರಾರಂಭಿಸುವುದಕ್ಕೆ ಈಗಾಗಲೇ ಸರ್ಕಾರದ ಬಳಿ ಪ್ರಸ್ತಾಪ ಇದೆ ಎಂದು ಹೇಳಿದರು.
ತಾಲೂಕಿಗೆ ಅಗತ್ಯವಿರುವ ಸರಕಾರಿ ಕಛೇರಿಗಳನ್ನು ಪ್ರಾರಂಭಿಸಲಿಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಉಪನೋಂದಣಾಧಿಕಾರಿಗಳ ಕಛೇರಿ ಹೊರತುಪಡಿಸಿ ಈಗಾಗಲೇ ತಾಲೂಕಾ ಮಟ್ಟದ ಬಹುತೇಕ ಕಛೇರಿಗಳು ಪ್ರಾರಂಭಗೊಂಡಿವೆ. ಸಾರ್ವಜನಿಕರಿಗೆ ಉಪನೋಂದಣಾಧಿಕಾರಿಗಳ ಕಛೇರಿ ಅಗತ್ಯವಿದ್ದು, ಈ ಕಛೇರಿಯನ್ನು ಪ್ರಾರಂಭಿಸಲಿಕ್ಕೆ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಕೋವಿಡ್ ಕಾರಣದಿಂದ ಕಛೇರಿಯ ಕಾರ್ಯಾರಂಭಕ್ಕೆ ವಿಳಂಬವಾಗುತ್ತಿದೆ. ಸರ್ಕಾರವು ಸಹ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ. ಇದೇ ತಿಂಗಳ ಅಂತ್ಯದೊಳಗೆ ಬೆಂಗಳೂರಿಗೆ ತೆರಳುತ್ತಿದ್ದು, ಮೂಡಲಗಿಯಲ್ಲಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಪ್ರಾರಂಭಿಸುವಂತೆ ಮತ್ತೊಮ್ಮೆ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನು ಕೋರಲಾಗುವುದು ಎಂದು ಹೇಳಿದರು.

ಮೂಡಲಗಿ ಪಟ್ಟಣದ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ನಾಗರೀಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಮೂಡಲಗಿ ಕ್ರಾಸ್‍ನಿಂದ ಕಾಲೇಜುವರೆಗಿನ ರಸ್ತೆ ಕಾಮಗಾರಿಯನ್ನು ಇಷ್ಟರಲ್ಲಿಯೇ ಆರಂಭಿಸಲಾಗುವುದು. ಪಿಎಂಜಿಎಸ್‍ವಾಯ್ ಯೋಜನೆಯಡಿ ಮೂಡಲಗಿಯಿಂದ ಮಸಗುಪ್ಪಿ ಕ್ರಾಸವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ನೀರಾವರಿ ಇಲಾಖೆಯ ಅನುದಾನದಡಿ ದನದ ಪೇಟೆ ರಸ್ತೆಯನ್ನು ಸಹ ಸುಧಾರಿಸಲಾಗುವುದು. ಗುರ್ಲಾಪೂರ ಕ್ರಾಸದಿಂದ ಮೂಡಲಗಿವರೆಗಿನ ರಸ್ತೆಯನ್ನು 4.90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಗುರ್ಲಾಪೂರ ಕ್ರಾಸ್‍ನಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕಾಗಿ 4.45 ಕೋಟಿ ರೂ. ಅನುದಾನವು ನೀರಾವರಿ ಇಲಾಖೆಯಿಂದ ಬಿಡುಗಡೆಯಾಗಲಿದೆ ಎಂದು ಹೇಳಿದರು.
ನೂತನವಾಗಿ ಕಾರ್ಯ ಮತ್ತು ಪಾಲನೆ ಉಪವಿಭಾಗ ಕಛೇರಿಯನ್ನು ಮೂಡಲಗಿಯಲ್ಲಿ ಪ್ರಾರಂಭಿಸಲಾಗಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. 43 ಗ್ರಾಮಗಳು ಈ ಕಛೇರಿಯ ವ್ಯಾಪ್ತಿಗೆ ಒಳಪಟ್ಟಿದ್ದು, ಮೂಡಲಗಿ ನಗರ, ಮೂಡಲಗಿ ಗ್ರಾಮೀಣ, ಕುಲಗೋಡ, ಯಾದವಾಡ ಹಾಗೂ ಹಳ್ಳೂರ ಶಾಖೆಗಳನ್ನು ಉಪವಿಭಾಗದ ಕಛೇರಿ ಹೊಂದಿದೆ. ಹಳ್ಳೂರ, ತಿಗಡಿ ಮತ್ತು ಅರಳಿಮಟ್ಟಿ 33 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರಗಳು 110 ಕೆವ್ಹಿಗೆ ಮೇಲ್ದರ್ಜೆಗೆ ಏರಲಿವೆ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮೂಡಲಗಿಯಲ್ಲಿ ಹೆಸ್ಕಾಂನಿಂದ ಹೊಸದಾಗಿ ಉಪವಿಭಾಗದ ಕಛೇರಿಯನ್ನು ಪ್ರಾರಂಭಿಸಿದ್ದು, ಇದರಿಂದ ಸುತ್ತಲಿನ 43 ಗ್ರಾಮಗಳ ವಿದ್ಯುತ್ ಗ್ರಾಹಕರಿಗೆ ಅನುಕೂಲವಾಗಲಿದೆ. ಮೂಡಲಗಿಯಲ್ಲಿ ಕಛೇರಿ ಆರಂಭಿಸಲಿಕ್ಕೆ ಪ್ರಯತ್ನಿಸಿದ ಶಾಸಕರು ಮತ್ತು ಅಧಿಕಾರಿಗಳಿಗೆ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಹುಬ್ಬಳ್ಳಿ ಹೆಸ್ಕಾಂ ವ್ಯವಸ್ಥಾಕ ನಿರ್ದೇಶಕ ಎಂ. ಮುನಿರಾಜು, ಬೆಳಗಾವಿ ಹೆಸ್ಕಾಂ ಅಧೀಕ್ಷಕ ಅಭಿಯಂತರ ಗಿರಿಧರ ಕುಲಕರ್ಣಿ, ಬೆಳಗಾವಿ ವೃತ್ತ ಕೆಪಿಟಿಸಿಎಲ್ ಅಧೀಕ್ಷಕ ಅಭಿಯಂತರ ಶ್ರೀಕಾಂತ ಸಸಾಲಟ್ಟಿ, ತಹಶೀಲ್ದಾರ ಡಿ.ಜೆ. ಮಹಾತ, ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಮುಖಂಡರಾದ ಹನಮಂತ ತೇರದಾಳ, ರವಿ ಪರುಶೆಟ್ಟಿ, ಘಟಪ್ರಭಾ ಹೆಸ್ಕಾಂ ಇಇ ಕಿರಣ ಸಣ್ಣಕ್ಕಿ, ಮೂಡಲಗಿ ಕಾರ್ಯ ಮತ್ತು ಪಾಲನೆ ಉಪವಿಭಾಗದ ಎಇಇ ಎಂ.ಎಸ್. ನಾಗನ್ನವರ, ಗೋಕಾಕ ಎಇಇ ಎಸ್.ಪಿ. ವರಾಳೆ, ಉದ್ಯಮಿ ರಾಜೇಂದ್ರ ದೇಸಾಯಿ, ಪುರಸಭೆ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Spread the love ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮ ರಾಜ್ಯ ನೆನಪಾಗುವುದೇ ಇಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ