ಶಿವಮೊಗ್ಗ: ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮೋದನೆ ಹಾಗೂ ಮಾರ್ಗದರ್ಶನದಲ್ಲಿ ನಡೆದಿರುವ ಪ್ರಾಣಿ ವಿನಿಮಯ ಯೋಜನೆಯಡಿ ಬಿಹಾರದ ಪಾಟ್ನಾದಲ್ಲಿರುವ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ 8 ತೋಳ ಹಾಗೂ 4 ಘರಿಯಾಲ್ಗಳನ್ನು ಶಿವಮೊಗ್ಗ ನಗರ ಹೊರವಲಯದ ತ್ಯಾವರೆಕೊಪ್ಪದಲ್ಲಿರುವ ಹುಲಿ-ಸಿಂಹ ಧಾಮಕ್ಕೆ ಕರೆತರಲಾಗಿದ್ದು, ಈ ಮೂಲಕ ಶಿವಮೊಗ್ಗ ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ.
ಪ್ರಾಣಿಗಳ ವಿನಿಮಯದ ಭಾಗವಾಗಿ ಶಿವಮೊಗ್ಗ ಮೃಗಾಲಯದಿಂದಲೂ ಎರಡು ಗಂಡು ಕಾಡುಕೋಣಗಳನ್ನು ಪಾಟ್ನಾ ಮೃಗಾಲಯಕ್ಕೆ ರವಾನಿಸಲಾಗಿದೆ. ಪಾಟ್ನಾದಿಂದ ಆಗಮಿಸಿದ ತೋಳಗಳ ಪೈಕಿ ಐದು ತೋಳಗಳನ್ನು ಮೂರು ವಾರಗಳ ಕಾಲ ವಿಶೇಷ ಕ್ವಾರಂಟೈನ್ನಲ್ಲಿರಿಸಲಾಗಿತ್ತು. ಈ ಅವಧಿಯಲ್ಲಿ ಹೊಸ ವಾತಾವರಣ, ಆಹಾರ ಶೈಲಿ ಮತ್ತು ಸ್ಥಳೀಯ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಆರೈಕೆ ಮತ್ತು ತರಬೇತಿ ನೀಡಲಾಗಿತ್ತು. ಪರೀಕ್ಷೆಯ ಬಳಿಕ ಪ್ರಾಣಿಗಳ ಆರೋಗ್ಯ ಸ್ಥಿತಿ ಸುಸ್ಥಿರವಾಗಿದೆ ಎಂಬುದು ದೃಢಪಟ್ಟಿದ್ದರಿಂದ ಇದೀಗ ಅವುಗಳನ್ನು ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ಮೃಗಾಲಯಕ್ಕೆ ತೋಳ ಮತ್ತು ಘರಿಯಾಲ್ಗಳ ಆಗಮನ ಅಪರೂಪದ ವನ್ಯಜೀವಿ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಗೆ ಹೊಸ ಪ್ರಾಣಿಗಳ ಆಗಮನದಿಂದ ಮತ್ತಷ್ಟು ಬಲ ಬಂದಿದೆ. ಜೊತೆಗೆ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೂ ವಿಶೇಷ ಆಕರ್ಷಣೆಯಾಗಿದೆ. ಮೃಗಾಲಯದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪಡೆ ಹೊಸ ವನ್ಯಮೃಗಗಳ ಚಲನವಲನಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ.
ಇನ್ನು ಪ್ರಾಣಿಗಳ ವಿನಿಮಯದ ಬಗ್ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರಾಕ್ಷರ ಬಿ.ಎಂ. ಮಾಹಿತಿ ನೀಡಿದ್ದು, ಕೇಂದ್ರ ಮೃಗಾಲಯ ಪ್ರಾಧಿಕಾರದ ನಿರ್ದೇಶನದಂತೆ ಪ್ರಾಣಿಗಳ ವಿನಿಮಯ ಮಾಡಲಾಗಿದೆ. ಇದರಿಂದಾಗಿ ಶಿವಮೊಗ್ಗ ಮೃಗಾಲಯದ ಒಟ್ಟು ಪ್ರಾಣಿ ತಳಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಹೀಗಾಗಿ ಶಿವಮೊಗ್ಗ ಮೃಗಾಲಯ ಚಿಕ್ಕ ಝೂ ನಿಂದ ಮಧ್ಯಮ ಮೃಗಾಲಯವಾಗಿ ಮೇಲ್ದರ್ಜೆಗೇರುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Laxmi News 24×7