ನವದೆಹಲಿ: ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರಿಂದ ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್‍ಡೀಲ್ ಕಂಪನಿಗಳು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳು ಆನ್‍ಲೈನ್ ವೇದಿಕೆಯಲ್ಲಿ ದೊರೆಯಲಿವೆ. ಆದರೆ ಕಂಪನಿಗಳ ಡೆಲಿವರಿ ವಾಹನಗಳು ಆಯಾ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಬುಧವಾರ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಕಮರ್ಶಿಯಲ್ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಬಹುದಾಗಿದೆ. ಇ-ಕಾಮರ್ಸ್ ಸಂಸ್ಥೆಗಳು ಆಯಾ ರಾಜ್ಯಗಳ ಸರ್ಕಾರದಿಂದ ಅನುಮತಿ ಪಡೆದು ಡೆಲಿವರಿ ವಾಹನಗಳನ್ನು ರೋಡಿಗಿಳಿಸಬಹುದಾಗಿದೆ.
ಆರಂಭದಲ್ಲಿ ಆಹಾರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಬುಧವಾರ ಹೊರಡಿಸಲಾದ ಮಾರ್ಗಸೂಚಿಯಲ್ಲಿ ಅಗತ್ಯ, ಅನಗತ್ಯ ವಸ್ತುಗಳು ಎಂದು ವಿಭಾಗಿಸಲಾಗಿಲ್ಲ. ಹೀಗಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳನ್ನೂ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.