ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಬಡ ಕುಟುಂಬಗಳಿಗೆ ಆಮಿಷವೊಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಕ್ಕೇರಿ ಗ್ರಾಮದ ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ವಿವಿಧ ಆಮಿಷಗಳನ್ನು ಒಡ್ಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿಂದೂ ಪರ ಸಂಘಟನೆಗಳಿಗೆ ಲಭ್ಯವಾಗಿತ್ತು. ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾದ ಕುಟುಂಬ ಸದಸ್ಯರ ಮನೆಗೆ ಬಜರಂಗದಳದ ಕಾರ್ಯಕರ್ತರು ದಿಢೀರ್ ಭೇಟಿ ನೀಡಿದ್ದಾರೆ. ಈ ವೇಳೆ ಮನೆಯಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
ಬಜರಂಗದಳದ ಕಾರ್ಯಕರ್ತರು ಸ್ಥಳದಲ್ಲಿದ್ದವರನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸುತ್ತಿದ್ದಂತೆ, ಮತಾಂತರ ಯತ್ನದ ಆರೋಪ ಹೊತ್ತಿದ್ದ ವ್ಯಕ್ತಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಇಂತಹ ಧಾರ್ಮಿಕ ಚಟುವಟಿಕೆಗಳನ್ನು ತಕ್ಷಣವೇ ತಡೆಯಬೇಕು ಎಂದು ಬಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಬಡವರ ಆಮಿಷದ ಮತಾಂತರ ಜಾಲದ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಅವರು ತೀವ್ರ ಒತ್ತಾಯ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಮತಾಂತರಕ್ಕಾಗಿ ಯಾರಾದರೂ ಒತ್ತಾಯ ಮಾಡಿದರೆ ಅಥವಾ ಇಂತಹ ಚಟುವಟಿಕೆಗಳು ಪುನರಾವರ್ತನೆಯಾದರೆ ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಕುಟುಂಬಸ್ಥರಿಗೆ ತಿಳಿಸಿ ಅಲ್ಲಿಂದ ವಾಪಸ್ ಆಗಿದ್ದಾರೆ. ಪ್ರಸ್ತುತ ಈ ಘಟನೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Laxmi News 24×7