ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಗ್ರಾಮದ ಸಮೀಪವಿರುವ ಕಣಿವೆ ಬಸವಣ್ಣ ರಸ್ತೆಯಲ್ಲಿ ಥಾರ್ ಜೀಪು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಮೃತಪಟ್ಟು, ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಸೊಣಮಾರನಹಳ್ಳಿಯ ಶಶಿಕುಮಾರ್ (32) ಮೃತ. ಈತನ ಸಹೋದರಿ ಚಂದನಾ (21) ಗಾಯಾಳು. ತಂಗಿಯನ್ನು ಗ್ರಾಮದಿಂದ ಚಿಕ್ಕಬಳ್ಳಾಪುರದಲ್ಲಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಥಾರ್ ಜೀಪು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಬಳಿಕ ಅಪಘಾತಕ್ಕೆ ಕಾರಣನಾದ ಅಪರಿಚಿತ ಚಾಲಕನೇ ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಶಶಿಕುಮಾರ್ ಆ ವೇಳೆಗಾಗಲೇ ಮೃತಪಟ್ಟಿರುವುದನ್ನು ವೈದ್ಯರು ಖಾತ್ರಿಪಡಿಸಿದ್ದಾರೆ. ಇದರಿಂದ ಆರೋಪಿಯು ಭಯದಲ್ಲಿ ತನ್ನ ವಾಹನವನ್ನು ಪೊಲೀಸ್ ಠಾಣೆಯ ಮುಂಭಾಗ ಬಿಟ್ಟು ಪರಾರಿಯಾಗಿದ್ದಾನೆ. ಹಾಗೆಯೇ ಗಾಡಿಯ ನಂಬರ್ ಪ್ಲೇಟ್ ಗಳನ್ನು ಕಿತ್ತು ಹಾಕಿದ್ದಾನೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಣಿವೆ ಬಸವಣ್ಣ ರಸ್ತೆಯ ಇಳಿಜಾರಿನಲ್ಲಿ ವಾಹನಗಳನ್ನು ವೇಗವಾಗಿ ಓಡಿಸುವಂತಹುದು, ಅಪಘಾತಗಳು ಸಂಭವಿಸುವಂತಹುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Laxmi News 24×7