Breaking News

ಬರ ಪರಿಹಾರದಲ್ಲೂ ಲೆಕ್ಕಾಚಾರದ ಎಡವಟ್ಟು: ಹೇಳಿದ್ದೊಂದು, ಕೊಟ್ಟಿದ್ದೊಂದು!

Spread the love

ಬರದಿಂದ ಕಂಗೆಟ್ಟ ರೈತರಿಗೆ ನೆರವಾಗಬೇಕಿದ್ದ ಸರ್ಕಾರದ ಪರಿಹಾರ ಹಣವೇ ಈಗ ಗೊಂದಲಕ್ಕೆ ಕಾರಣವಾಗಿದೆ. ಮೊದಲ ಕಂತಿನಲ್ಲಿ ತಲಾ ₹2,500 ನೀಡುವುದಾಗಿ ಘೋಷಿಸಿದ್ದರೂ, ರೈತರ ಖಾತೆಗೆ ಮಾತ್ರ ಬೇರೆ ಬೇರೆ ಮೊತ್ತ ಜಮೆಯಾಗುತ್ತಿದೆ. ಕೆಲವರಿಗೆ ₹1,500, ಮತ್ತೆ ಕೆಲವರಿಗೆ ₹2,000 ಮಾತ್ರ ಬಂದಿದೆ. ಇನ್ನು ಸಣ್ಣ ರೈತರಿಗೆ ಗುಂಟೆ ಆಧಾರದ ಮೇಲೆ ಕೇವಲ ₹85ರಂತೆ ಪರಿಹಾರ ಸಿಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಕಾರದ ಭರವಸೆ ಮತ್ತು ರೈತರ ಖಾತೆಗೆ ಬಂದ ಹಣದ ನಡುವೆ ವ್ಯತ್ಯಾಸ ಕಂಡುಬಂದಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಸರ್ಕಾರ ಒಟ್ಟು ₹5,000 ಬರ ಪರಿಹಾರ ಘೋಷಿಸಿದ್ದು, ಮೊದಲ ಕಂತಿನಲ್ಲಿ ₹2,500 ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ನವೆಂಬರ್ 5ರಂದು ನಡೆದ ರೈತರ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ 1.06 ಲಕ್ಷ ರೈತರಿಗೆ ತಲಾ ₹2,500ರಂತೆ ಒಟ್ಟು ₹17.43 ಕೋಟಿ ಬಿಡುಗಡೆಗೆ ಚಾಲನೆ ನೀಡಿದ್ದರು. ಆದರೆ ಹಣ ಖಾತೆಗೆ ಜಮೆಯಾಗುತ್ತಿದ್ದಂತೆ ನಿರೀಕ್ಷಿತ ಮೊತ್ತ ಸಿಗದೆ ರೈತರು ಬ್ಯಾಂಕ್‌ಗಳಿಗೆ ಅಲೆದಾಡುವಂತಾಗಿದೆ. ಈ ಗೊಂದಲ ಯಾದಗಿರಿ ಹಾಗೂ ಗದಗ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಂಡುಬಂದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ನಿಗದಿತ ಮೊತ್ತಕ್ಕಿಂತ ಕಡಿಮೆ ಹಣ ಜಮೆಯಾಗಿದೆ ಎಂದು ರೈತರು ದೂರಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ಕಾರದಿಂದ ಬಂದಿರುವ ಮೊತ್ತವನ್ನೇ ಖಾತೆಗೆ ಜಮೆ ಮಾಡಲಾಗಿದೆ. ಹೆಚ್ಚಿನ ಮಾಹಿತಿ ತಮಗೆ ತಿಳಿದಿಲ್ಲ ಎಂಬ ಉತ್ತರ ಸಿಗುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾದಗಿರಿ ಮತ್ತು ಗದಗ ಜಿಲ್ಲೆಗಳಲ್ಲಿ ಪರಿಹಾರ ವಿತರಣೆಯಲ್ಲಿ ತಾಂತ್ರಿಕ ವ್ಯತ್ಯಾಸವಾಗಿರುವ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ರಜೆ ಇದ್ದ ಕಾರಣ ತಕ್ಷಣ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಅಧಿಕಾರಿಗಳಿಂದ ವರದಿ ಪಡೆದು ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುವುದು ಎಂದಿದ್ದಾರೆ.

ಇನ್ನು ಸಚಿವ ಎಂ.ಬಿ. ಪಾಟೀಲ್ ಕೂಡ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಕಡಿಮೆ ಮೊತ್ತ ಜಮೆಯಾಗಿರುವುದಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳಿಂದ ತಿಳಿದುಕೊಳ್ಳಲಾಗುವುದು. ರೈತರಿಗೆ ನೀಡಿರುವ ಭರವಸೆಯಂತೆ ಪೂರ್ಣ ಪ್ರಮಾಣದ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ ರೈತರ ಖಾತೆಗೆ ಕಡಿಮೆ ಹಣ ಜಮೆಯಾಗಿರುವುದಕ್ಕೆ ನಿಜವಾದ ಕಾರಣವೇನು ಮತ್ತು ಬಾಕಿ ಮೊತ್ತ ಯಾವಾಗ ತಲುಪಲಿದೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಸರ್ಕಾರದ ಮುಂದಿನ ಕ್ರಮದತ್ತ ರೈತರು ಕಾಯುತ್ತಿದ್ದಾರೆ.


Spread the love

About Laxminews 24x7

Check Also

ಡಾ.ರಾಜ್ ಸಂಬಂಧಿ ಮನೆಯಲ್ಲಿ ಸ್ಪೋಟ ಕೇಸ್ – ಕಚ್ಚಾ ಬಾಂಬ್ ಅಲ್ಲ, ಪಟಾಕಿ ಸ್ಪೋಟ: ತಮಿಳುನಾಡು ಪೊಲೀಸರ ಸ್ಪಷ್ಟನೆ

Spread the loveಚಾಮರಾಜನಗರ: ತಮಿಳುನಾಡಿನ  ದೊಡ್ಡ ಗಾಜನೂರಿನಲ್ಲಿರುವ ವರನಟ ಡಾ.ರಾಜ್‌ಕುಮಾರ್ ಅವರ ದೂರದ ಸಂಬಂಧಿಯ ಮನೆ ಮುಂದೆ ಸಂಭವಿಸಿದ ಸ್ಫೋಟ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ