ಸರಕಾರ ಕಳೆದ ಮೂರು ತಿಂಗಳಿನಿಂದ ತಡೆಹಿಡಿದಿರುವ ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಸಹಾಯಕಿಯರ ಗೌರವಧನವನ್ನು ಹಾಗೂ ಕೋಳಿ ಮೊಟ್ಟೆಯ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಇಂದು ಪ್ರತಿಭಟನೆ ನಡೆಸಿದರು.
ಹೌದು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರಕಾರ ತಡೆಹಿಡಿದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮೂರು ತಿಂಗಳ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಹಾಗೂ ಕೋಳಿ ಮೊಟ್ಟೆಗಳ ಹಣವನ್ನೂ ಕೂಡ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಮಂದಾ ನೇವಗಿ, ಕೊರೊನಾ ಕಾಲದಲ್ಲಿಯೂ ಕೂಡ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡಿದ್ದಾರೆ. ಆದರೆ ಆಗಲೂ ಕೂಡ ನಮಗೆ ಸಾಕಷ್ಟು ತೊಂದರೆಯಾಗಿದೆ. ಆದರೆ ಈಗ ಸರಕಾರದಿಂದ ನಮಗೆ ಬರಬೇಕಾದ ಮೂರು ತಿಂಗಳ ಗೌರವಧನವನ್ನು ಬಿಡುಗಡೆ ಮಾಡಿಲ್ಲ.