ಶಿವಮೊಗ್ಗ, ಏಪ್ರಿಲ್ 6: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರು ಲೆಕ್ಕದಲ್ಲೂ ಇಲ್ಲ, ಬುಕ್ಕದಲ್ಲೂ ಇಲ್ಲ. ತೊಟ್ಟಿಯಲ್ಲಿರುವ ಕಸದಂತಾಗಿದೆ ಸಿದ್ದರಾಮಯ್ಯ ಅವರ ಪರಿಸ್ಥಿತಿ. ಹಾಗಾಗಿ ಮೊದಲು ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದರು.
ಕೆ.ಎಸ್ ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
“”ಮೈಸೂರು ಮೇಯರ್, ಉಪ ಮೇಯರ್ ಚುನಾವಣೆ ಸಂದರ್ಭ ತಮ್ಮ ಮಾತು ಕೇಳಲಿಲ್ಲ ಎಂದು ನಾಲ್ಕು ದಿನ ಹೋಗಿ ರೆಸಾರ್ಟ್ ನಲ್ಲಿ ಕೂತಿದ್ದರು. ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿದೆ ಎಂದು ರಮೇಶ್ ಕುಮಾರ್ ಅವರೂ ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಸ್ಥಿತಿ ಹೇಗಿದೆ ಅಂದರೆ ತೊಟ್ಟಿಯಲ್ಲಿರುವ ಕಸದಂತಾಗಿದೆ. ಹಾಗಾಗಿ ಮೊದಲು ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಸಚಿವ ಈಶ್ವರಪ್ಪ ಆಗ್ರಹಿಸಿದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದೆ. ಕರ್ನಾಟಕದಲ್ಲಿ ಇಷ್ಟೊಂದು ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಸಿದ್ದರಾಮಯ್ಯ ಅವರಿಗೆ ತಲೆಕೆಟ್ಟು ಹೋಗಿದೆ ಎಂದು ಆರೋಪಿಸಿದರು.
Laxmi News 24×7