ನವದೆಹಲಿ: ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಕಡಿತವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳ ಮೇಲೆ ಬಡ್ಡಿದರ ಕಡಿತ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ನಿನ್ನೆ ಪ್ರಕಟಿಸಿತ್ತು. ಬ್ಯಾಂಕ್ ಗಳಲ್ಲಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರ ಕಡಿತದಂತೆಯೇ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಎನ್ ಎಸ್ ಸಿ ಮತ್ತು ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯಗಳ ಮೇಲೆ ಬಡ್ಡಿದರವನ್ನು ಶೇಕಡಾ 1.1ರಷ್ಟು ಕಡಿತ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.
ಪಿಪಿಎಫ್ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇಕಡಾ 0.7ರಿಂದ 6.4ರವರೆಗೆ ಎನ್ ಎಸ್ ಸಿಯ ಬಡ್ಡಿದರವನ್ನು ಶೇಕಡಾ 0.9ರಿಂದ ಶೇಕಡಾ 5.9ರವರೆಗೆ ಕಡಿತ ಮಾಡಲಾಗಿತ್ತು.
ಆದರೆ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿ, ಕಳೆದ ರಾತ್ರಿಯ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ. ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಳೆದ ಆರ್ಥಿಕ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿದ್ದಂತೆಯೇ ಮುಂದುವರಿಸಲಾಗುವುದು ಎಂದಿದ್ದಾರೆ.
Laxmi News 24×7