Breaking News

ಸ್ಟಿಂಗ್ ಕೇಸ್‌ – ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ಹಿಂದೇಟು

Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಇದೀಗ ಪ್ರಮುಖ ಸಾಕ್ಷ್ಯ ಸಂಗ್ರಹವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಕರಣದ ಪ್ರಮುಖ ಆರೋಪಿ ಕೃಪಾ ಆಳ್ವ(Kripa Alva) ಅವರು ವಿಚಾರಣೆಗೆ ಸಹಕರಿಸದೆ, ಸ್ಟಿಂಗ್‌ಗೆ ಬಳಸಲಾದ ಮೊಬೈಲ್ ಫೋನ್ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೃಪಾ ಆಳ್ವ ಅವರನ್ನು ಮೂರು ಬಾರಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ವಿಚಾರಣೆಯ ವೇಳೆ ಯಾವುದೇ ಸ್ಪಷ್ಟ ಮಾಹಿತಿ ಸಿಗದ ಕಾರಣ ತನಿಖೆಗೆ ಹಿನ್ನಡೆಯಾಗಿದೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಲಾದ ಮೂಲ ಮೊಬೈಲ್ ಫೋನ್ ಹಾಗೂ ಪ್ರಸ್ತುತ ಕೃಪಾ ಆಳ್ವ ಅವರು ಬಳಸುತ್ತಿರುವ ಮೊಬೈಲ್ ಅನ್ನು ತನಿಖೆಗಾಗಿ ಹಸ್ತಾಂತರಿಸುವಂತೆ ಪೊಲೀಸರು ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

ವಶಪಡಿಸಿಕೊಳ್ಳಲಿರುವ ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ, ವಿಡಿಯೋದ ಅಸಲಿಯತ್ತು ಮತ್ತು ಡಿಲೀಟ್ ಆಗಿರಬಹುದಾದ ದತ್ತಾಂಶಗಳನ್ನು ಪತ್ತೆಹಚ್ಚಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಆದರೆ, ಮೊಬೈಲ್ ನೀಡಲು ನಿರಾಕರಿಸುತ್ತಿರುವ ಕೃಪಾ ಆಳ್ವ, ಬುಧವಾರದಂದು ಫೋನ್ ತಂದು ಕೊಡುವುದಾಗಿ ಪೊಲೀಸರ ಮುಂದೆ ಸಬೂಬು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕೃಪಾ ಆಳ್ವ ವಾದವೇನು?
ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿರುವ ಕೃಪಾ ಆಳ್ವ, ತಾವು ಯಾವುದೇ ರೀತಿಯ ಸ್ಟಿಂಗ್ ಆಪರೇಷನ್ ಮಾಡಿಸಿಲ್ಲ ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. “ಘಟನೆ ನಡೆದ ದಿನ ನಾನು ಆ ಸ್ಥಳದಲ್ಲಿದ್ದಿದ್ದು ನಿಜ. ಆದರೆ, ಅಲ್ಲಿ ಯಾರೋ ವಿಡಿಯೋ ಮಾಡಿರುವುದು ನನಗೆ ಗೊತ್ತೇ ಇರಲಿಲ್ಲ” ಎಂದು ವಿಚಾರಣೆಯ ವೇಳೆ ವಾದ ಮಂಡಿಸಿದ್ದಾರೆ. ಅಲ್ಲದೆ “ಆ ಸಂದರ್ಭದಲ್ಲಿ ಬಳಸುತ್ತಿದ್ದ ಮೊಬೈಲ್ ಫೋನ್ ಅನ್ನು ಈಗಾಗಲೇ ಬದಲಾಯಿಸಲಾಗಿದ್ದು, ಪ್ರಸ್ತುತ ನಾನು ಆ ಫೋನ್ ಬಳಸುತ್ತಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ಬುಧವಾರ ಕೃಪಾ ಆಳ್ವ ಅವರು ಮೊಬೈಲ್ ಹಸ್ತಾಂತರಿಸುತ್ತಾರೆಯೇ ಅಥವಾ ಪೊಲೀಸರು ಕಾನೂನು ಕ್ರಮದ ಮೂಲಕ ಮೊಬೈಲ್ ವಶಪಡಿಸಿಕೊಳ್ಳುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.


Spread the love

About Laxminews 24x7

Check Also

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the loveಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ