ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ಎರಡೂ ಘಟನೆಗಳಿಗೆ ಕಳೆದ ವರ್ಷ ಸಾಲ್ಸ್‌ವಿಲ್ಲೆ ಯಲ್ಲಿ ನಡೆದ ಹತ್ಯೆಗಳೊಂದಿಗೆ ನಂಟು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಮವಾರ (ನ.16) ಮುಂಜಾನೆ ಪೀಟರ್‌ಮಾರಿಟ್ಜ್‌ಬರ್ಗ್ ನಗರದ ಹೊರವಲಯದ ಸ್ವೀಟ್‌ವಾಟರ್ಸ್ ಎಂಬಲ್ಲಿ ಮೊದಲ ಗುಂಡಿನ ದಾಳಿ ನಡೆದಿದೆ. ದಾಳಿಗೆ ತುತ್ತಾಗಿದ್ದ ವಾಹನವೊಂದರ ಒಳಗೆ 8 ಮಂದಿಯ ಶವಗಳು ಪತ್ತೆಯಾಗಿವೆ. ಮೃತರೆಲ್ಲರೂ 20 ರಿಂದ 30 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.
ಇದಾದ ಬಳಿಕ, ರಾಜಧಾನಿ ಪ್ರಿಟೋರಿಯಾ ಹೊರವಲಯದ ಕೊಳೆಗೇರಿ ಪ್ರದೇಶದ ನಾಲ್ಕು ಕೋಣೆಗಳ ಶೆಡ್ ಒಂದರಲ್ಲಿ ಗುಂಡೇಟಿನ ಗಾಯಗಳೊಂದಿಗೆ 9 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಮೃತರಲ್ಲಿ ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಸಮೀಪದ ಸಾಲ್ಸ್‌ವಿಲ್ಲೆ ಕೊಳೆಗೇರಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಗೆ ಇವುಗಳ ನಂಟು ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆ ಘಟನೆಯಲ್ಲಿ 12 ಮಂದಿ ಮೃತಪಟ್ಟು, 13 ಜನರು ಗಾಯಗೊಂಡಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೌಟೆಂಗ್ ಪೊಲೀಸ್ ಆಯುಕ್ತ ಟಾಮಿ ಎಂಥೊಂಬೆನಿ, `ಮೃತರಲ್ಲಿ ಒಬ್ಬನು ಕಳೆದ ವರ್ಷದ ಸಾಲ್ಸ್‌ವಿಲ್ಲೆ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಂಕಿತ ಆರೋಪಿಯಾಗಿದ್ದ. ಹೀಗಾಗಿ ಹಳೆಯ ಪ್ರಕರಣದ ನಂಟು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಹುಶಃ ಇದೊಂದು ಪ್ರತೀಕಾರದ ದಾಳಿಯಾಗಿರಬಹುದು ಎಂದು ಹೇಳಿದ್ದಾರೆ.
Laxmi News 24×7