ಮಂಡ್ಯ: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕೆಎಂಎಫ್‌ನ ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಮೊಸರು ಪ್ಯಾಕೆಟ್ ಒಳಗೆ ಸಿಮ್ ಕಾರ್ಡ್ ಬಂದಿರಲೇ ಇಲ್ಲ, ಬದಲಿಗೆ ಗಾಡಿಯ ಪೌಚ್‌ನಲ್ಲಿದ್ದ ಸಿಮ್ ಕಣ್ತಪ್ಪಿನಿಂದ ಮೊಸರಿಗೆ ಬಿದ್ದಿತ್ತು ಎಂಬ ಅಸಲಿ ಸತ್ಯ ಮಂಡ್ಯ ಪೊಲೀಸರ ಚುರುಕಿನ ವಿಚಾರಣೆಯಲ್ಲಿ ಬಯಲಾಗಿದೆ.
ಮದ್ದೂರು ಮೂಲದ ಅರುಣ್ ಕುಮಾರ್ ಎಂಬುವರು ತಾನು ಖರೀದಿಸಿದ ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿ, ಗ್ರಾಹಕರ ನೆಚ್ಚಿನ ನಂದಿನಿ ಬ್ರ್ಯಾಂಡ್ ಗುಣಮಟ್ಟದ ಬಗ್ಗೆಯೇ ಭಾರೀ ಅನುಮಾನ ಮೂಡಿಸುವಂತೆ ಮಾಡಿತ್ತು.
ಪೊಲೀಸ್ ತನಿಖೆಯಲ್ಲಿ ಸಿಕ್ಕ ಬ್ರೇಕಿಂಗ್ ಲೀಡ್:
ವಿಷಯ ಗಂಭೀರವಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಮಂಡ್ಯ ಪೊಲೀಸರು ಅರುಣ್ ಕುಮಾರ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಜೊತೆಗೆ ವಿಡಿಯೋದಲ್ಲಿದ್ದ ಸಿಮ್ ಕಾರ್ಡ್ನ ವಿವರ ಕಲೆಹಾಕಿದ ಪೊಲೀಸರಿಗೆ ಅಸಲಿ ಸಂಗತಿ ಬೆಳಕಿಗೆ ಬಂದಿದೆ. ಆ ಸಿಮ್ ಕಾರ್ಡ್ ಬೇರೆ ಯಾರದ್ದೋ ಅಲ್ಲ, ಸ್ವತಃ ಅರುಣ್ ಕುಮಾರ್ ಅವರ ಭಾವಮೈದನ ಹೆಸರಿನಲ್ಲಿತ್ತು. ಅಷ್ಟೇ ಅಲ್ಲದೆ, ಆ ಸಿಮ್ ಅನ್ನು ಅರುಣ್ ಪತ್ನಿಯೇ ಬಳಕೆ ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ.
ಅಸಲಿಗೆ ಅಂದು ನಡೆದಿದ್ದೇನು?
ಪೊಲೀಸರ ವಿಚಾರಣೆ ವೇಳೆ ಸಂಪೂರ್ಣ ಸತ್ಯವನ್ನು ಅರುಣ್ ಬಿಚ್ಚಿಟ್ಟಿದ್ದಾರೆ. ಅಂಗಡಿಯಿಂದ ಮೊಸರು ಪ್ಯಾಕೆಟ್ ತರುವಾಗ, ದ್ವಿಚಕ್ರ ವಾಹನದ ಪೌಚ್‌ನಲ್ಲಿದ್ದ ಸಿಮ್ ಕಾರ್ಡ್ ಪ್ಯಾಕೆಟ್‌ಗೆ ಹೊರಗಿನಿಂದ ಅಂಟಿಕೊಂಡಿತ್ತು. ಮನೆಗೆ ತಂದು ಮೊಸರನ್ನು ಬಾಣಲೆಗೆ ಕತ್ತರಿಸಿ ಸುರಿಯುವ ಸಂದರ್ಭದಲ್ಲಿ, ಪ್ಯಾಕೆಟ್‌ಗೆ ಅಂಟಿಕೊಂಡಿದ್ದ ಸಿಮ್ ಕೂಡ ಬಾಣಲೆಗೆ ಬಿದ್ದಿದೆ. ಇದನ್ನು ಸರಿಯಾಗಿ ಗಮನಿಸದ ಅರುಣ್, ಮೊಸರು ಪ್ಯಾಕೆಟ್ ಒಳಗಡೆಯಿಂದಲೇ ಸಿಮ್ ಬಂದಿದೆ ಎಂದು ಭಾವಿಸಿ ಅವಸರದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದರು.
ವಿಡಿಯೋ ಮಾಡಿ ಕ್ಷಮೆಯಾಚನೆ:
ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಸಾಬೀತಾಗುತ್ತಿದ್ದಂತೆ ತನ್ನ ತಪ್ಪಿನ ಅರಿವಾದ ಅರುಣ್ ಕುಮಾರ್, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ನಂದಿನಿ ಬ್ರಾಂಡ್ ಅತ್ಯಂತ ಶುದ್ಧವಾಗಿದೆ. ಕಣ್ತಪ್ಪಿನಿಂದ ಹಾಗೂ ಗಾಬರಿಯಲ್ಲಿ ನಾನೇ ತಪ್ಪು ಆರೋಪ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ
Laxmi News 24×7