ಬೆಂಗಳೂರು: ರಾಜ್ಯದಲ್ಲಿ SC/ST ಮೀಸಲಾತಿಹೆಚ್ಚಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಡಿಸಿಎಂ ಪರಮೇಶ್ವರ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ವಿಚಾರವಾಗಿ, ಪ್ರಧಾನಿ ನರೇಂದ್ರ ಮೋದಿ , ಗೃಹ ಸಚಿವ ಅಮಿತ್ ಶಾ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ. ವೀರೇಂದ್ರ ಕುಮಾರ್ ಅವರಿಗೆ ಪರಮೇಶವರ್ ಅವರು ಪತ್ರ ಬರೆದಿದ್ದಾರೆ.
ರಾಜ್ಯದ ಎಸ್ಸಿ/ಎಸ್ಟಿ ಮೀಸಲಾತಿ ಕಾಯಿದೆ, 2022ನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು. ಇದಕ್ಕಾಗಿ ತುರ್ತು ಮಧ್ಯಪ್ರವೇಶ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಲಾಗಿದೆ. ಎಸ್ಸಿಗಳಿಗೆ ಶೇ.17 ಮತ್ತು ಎಸ್ಟಿಗಳಿಗೆ ಶೇ.7 ರಷ್ಟು ಮೀಸಲಾತಿಯನ್ನು ಕರ್ನಾಟಕ ಸರ್ಕಾರ ಹೆಚ್ಚಿಸಿತ್ತು. ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಅವರು ಒತ್ತಾಯಿಸಿದ್ದಾರೆ.
ತಮಿಳುನಾಡಿನ 69% ಮೀಸಲಾತಿ ವ್ಯವಸ್ಥೆಯನ್ನು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. ಕರ್ನಾಟಕದಲ್ಲೂ ಮೀಸಲಾತಿ ಹೆಚ್ಚಳಕ್ಕೆ ಅಗತ್ಯ ಸಾಂವಿಧಾನಿಕ ತಿದ್ದುಪಡಿಯನ್ನು ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವಂತೆ ಪತ್ರದಲ್ಲಿ ಅವರು ಆಗ್ರಹಿಸಿದ್ದಾರೆ.
ಪತ್ರದಲ್ಲಿರುವ ಬೇಡಿಕೆಗಳೇನು?
1. ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸುವ ಕರ್ನಾಟಕದ ಕಾಯ್ದೆಯನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಬೇಕು.
2. ಕಾಯ್ದೆಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಲು ಅಗತ್ಯವಾದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತುರ್ತಾಗಿ ಆರಂಭಿಸಬೇಕು.
3. ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಗಳೊಂದಿಗೆ ಸಮಾಲೋಚನೆ ನಡೆಸಿ, ನ್ಯಾಯಾಲಯ ಗುರುತಿಸಿರುವ ಸಂವಿಧಾನಾತ್ಮಕ ಹಾಗೂ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.
4. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಾಗೂ ಗೃಹ ಸಚಿವಾಲಯಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಕಾಲಮಿತಿಯೊಳಗೆ ಸೂಕ್ತ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನುಕೈಗೊಳ್ಳಬೇಕು.
5. ದೇಶದ ಬದಲಾಗುತ್ತಿರುವ ಸಾಮಾಜಿಕ ವಾಸ್ತವಗಳು, ವಿವಿಧ ರಾಜ್ಯಗಳ ಅನುಭವಗಳು ಹಾಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂವಿಧಾನಾತ್ಮಕ ತತ್ವಗಳನ್ನು ಪರಿಗಣಿಸಿ, ಶೇ.50ರ ಮೀಸಲಾತಿ ಮಿತಿಯ ಪ್ರಸ್ತುತತೆ ಮತ್ತು ಅನ್ವಯದ ಕುರಿತು ರಾಷ್ಟ್ರಮಟ್ಟದಲ್ಲಿ ವ್ಯಾಪಕ ಸಮಾಲೋಚನೆ ನಡೆಸಬೇಕು.
6. ತಮಿಳುನಾಡಿನ ಶೇ.69ರ ಮೀಸಲಾತಿಗೆ ಸಂವಿಧಾನಾತ್ಮಕ ರಕ್ಷಣೆ ಒದಗಿಸಿರುವಂತೆ, ಕರ್ನಾಟಕದ ಶೇ.56ರ ಒಟ್ಟು ಮೀಸಲಾತಿಯ ಭಾಗವಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೇ.24ರ ಒಟ್ಟು ಮೀಸಲಾತಿಗೂ ಸಂವಿಧಾನಾತ್ಮಕ ರಕ್ಷಣೆ ದೊರೆಯಬೇಕು.
Laxmi News 24×7