Breaking News

ಮೆಟ್ರೋ ಉದ್ಘಾಟನೆಗೂ ಮುನ್ನ ಫ್ಲೆಕ್ಸ್ ವಾರ್; ಮೋದಿ, ಸಿಎಂ ಸ್ವಾಗತಕ್ಕೆ ಕಾಂಗ್ರೆಸ್–ಬಿಜೆಪಿ ಕಾರ್ಯಕರ್ತರ ಪೈಪೋಟಿ!

Spread the love

ಬೆಂಗಳೂರು: ನಮ್ಮ ಮೆಟ್ರೋ ವಿಸ್ತರಣೆ ಹಾಗೂ ಉದ್ಘಾಟನೆ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫ್ಲೆಕ್ಸ್ ಹಾಗೂ ಬಂಟಿಂಗ್ಸ್ ಅಳವಡಿಸುವ ವಿಚಾರದಲ್ಲಿ ಪೈಪೋಟಿ ಜೋರಾಗಿದೆ.

ಈ ಹಿಂದೆ ಮೆಟ್ರೋ ಕ್ರೆಡಿಟ್ ವಿಚಾರವಾಗಿ ನಡೆದಿದ್ದ ರಾಜಕೀಯ ವಾಕ್ಸಮರದ ಬೆನ್ನಲ್ಲೇ ಇದೀಗ ಉದ್ಘಾಟನೆಯ ಸ್ವಾಗತದ ವಿಚಾರದಲ್ಲೂ ಉಭಯ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಡೈರಿ ಸರ್ಕಲ್‌ನಿಂದ ಪ್ರಧಾನಿ ನರೇಂದ್ರ ಮೋದಿ  ಅವರು ಉದ್ಘಾಟಿಸಲಿರುವ ಮೆಟ್ರೋ ಮಾರ್ಗದುದ್ದಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಅವರ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನ ಹಾಕಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಸ್ವಾಗತದ ಫ್ಲೆಕ್ಸ್‌ಗಳನ್ನ ಅಳವಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮಾರ್ಗದುದ್ದಕ್ಕೂ ಪಕ್ಷದ ಭಾವುಟಗಳನ್ನು ಹಾಕುವ ಮೂಲಕ ಗಮನ ಸೆಳೆದಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ಬಂಟಿಂಗ್ಸ್‌ಗಳನ್ನು ಅಳವಡಿಸಿದ್ದಾರೆ. ಹೀಗೆ ಮೆಟ್ರೋ ಮಾರ್ಗದುದ್ದಕ್ಕೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಫ್ಲೆಕ್ಸ್‌ಗಳು, ಬಂಟಿಂಗ್ಸ್‌ಗಳು ಹಾಗೂ ಭಾವುಟಗಳು ರಾರಾಜಿಸುತ್ತಿದ್ದು, ಉದ್ಘಾಟನೆಗೂ ಮುನ್ನವೇ ರಾಜಕೀಯ ಪೈಪೋಟಿಗೆ ಸಾಕ್ಷಿಯಾಗಿದೆ.

6.7 ಕಿ.ಮೀ.ನಿಂದ 103 ಕಿ.ಮೀ.ವರೆಗೆ ನಮ್ಮ ಮೆಟ್ರೋ ಜಾಲದ ವಿಸ್ತರಣೆ
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಆರಂಭವಾಗಿ ಸುಮಾರು 15 ವರ್ಷಗಳಾಗಿವೆ. 2011ರ ಅಕ್ಟೋಬರ್ 20ರಂದು ನೇರಳೆ ಮಾರ್ಗದ ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ 6.7 ಕಿ.ಮೀ. ಉದ್ದದ ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ರೈಲು ಸಂಚಾರ ಆರಂಭವಾಗಿತ್ತು. ಅಲ್ಲಿಂದ ಹಂತ ಹಂತವಾಗಿ ವಿಸ್ತರಣೆಗೊಂಡ ನಮ್ಮ ಮೆಟ್ರೋ ಜಾಲ ಇದೀಗ 96.1 ಕಿ.ಮೀ. ಉದ್ದಕ್ಕೆ ತಲುಪಿದೆ.

ಇದೀಗ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಮೆಟ್ರೋ ಜಾಲದ ಒಟ್ಟು ಉದ್ದ 103 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ.

ಬೆಂಗಳೂರಿನ 4 ಮೆಟ್ರೋ ಮಾರ್ಗಗಳ ವಿವರ
1. ನೇರಳೆ ಮಾರ್ಗ (Purple Line): ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 43.49 ಕಿ.ಮೀ. ಉದ್ದವಿದೆ.
2. ಹಸಿರು ಮಾರ್ಗ (Green Line): ಮದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 33.46 ಕಿ.ಮೀ. ಉದ್ದ ಹೊಂದಿದೆ.
3. ಹಳದಿ ಮಾರ್ಗ: ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸುಮಾರು 19.15 ಕಿ.ಮೀ. ಉದ್ದವಿದೆ.
4. ಗುಲಾಬಿ ಮಾರ್ಗ : ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಒಟ್ಟು 21.26 ಕಿ.ಮೀ. ಉದ್ದವನ್ನು ಹೊಂದಿದೆ. ಇದರಲ್ಲಿ 13.76 ಕಿ.ಮೀ. ಸುರಂಗ ಮಾರ್ಗವಾಗಿದ್ದು, 7.5 ಕಿ.ಮೀ. ಎತ್ತರಿಸಿದ ಮಾರ್ಗವಾಗಿದೆ. ಕಾಳೇನ ಅಗ್ರಹಾರದಿಂದ ಎಸ್.ಜಿ. ಪಾಳ್ಯವರೆಗಿನ 7.5 ಕಿ.ಮೀ. ಎತ್ತರಿಸಿದ ಮಾರ್ಗವೂ ಈ ಯೋಜನೆಯ ಭಾಗವಾಗಿದೆ.

ಇಂದು ಗುಲಾಬಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಚಾಲನೆ ದೊರೆಯಲಿದ್ದು, ನಾಳೆಯಿಂದ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಈ ಮಾರ್ಗದ ಆರಂಭದಿಂದ ಬೆಂಗಳೂರಿನ ಹಲವು ಪ್ರಮುಖ ಪ್ರದೇಶಗಳ ನಡುವಿನ ಸಂಪರ್ಕ ಮತ್ತಷ್ಟು ಸುಲಭವಾಗುವ ನಿರೀಕ್ಷೆಯಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ 60ಕ್ಕೂ ಹೆಚ್ಚು ಅಮೃತ್ ಭಾರತ್ ರೈಲು ನಿಲ್ದಾಣಗಳು ರೂಪುಗೊಳ್ಳಲಿವೆ; ಅಣ್ಣಮ್ಮ ದೇವಿಗೆ ʻನಮೋʼ ಪ್ರಣಾಮ!

Spread the loveಬೆಂಗಳೂರು: ಕರ್ನಾಟಕದಲ್ಲಿ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಸೇರಿದಂತೆ 60ಕ್ಕೂ ಹೆಚ್ಚು ರೈಲು ನಿಲ್ದಾಣಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ