ಶಿವಮೊಗ್ಗ: ಕಾಡುಪ್ರಾಣಿಗಳ ಕಾಟ ತಪ್ಪಿಸಿಕೊಳ್ಳಲು ಗದ್ದೆಗೆ ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ತುಳಿದು 13 ವರ್ಷದ ಕಾಡಾನೆ (Elephant) ಸಾವನ್ನಪ್ಪಿದ ಘಟನೆ ಗಾಜನೂರು ಸಮೀಪದ ಈಚಲವಾಡಿ ಗ್ರಾಮದಲ್ಲಿ ನಡೆದಿದೆ.
ಶಂಕರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಕಾಡಾನೆ ಬಂದಿತ್ತು. ಈ ವೇಳೆ ಫಸಲಿಗೆ ಬಂದಿದ್ದ ಗದ್ದೆಯನ್ನು ರಕ್ಷಿಸಲು ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ತುಳಿದು ಆನೆ ಸಾವನ್ನಪ್ಪಿದೆ. ಕಾಡಾನೆ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಜಮೀನಿನ ಮಾಲೀಕ ಸಯ್ಯದ್ ಆಲಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಜಮೀನು ಮಾಲೀಕ ಅಧಿಕಾರಿಗಳ ಮುಂದೆ ತಾನೇ ವಿದ್ಯುತ್ ತಂತಿ ಎಳೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
Laxmi News 24×7